ನವದೆಹಲಿ: ನೀವು ಈ ಬೇಸಿಗೆಯಲ್ಲಿ ಎಲ್ಲಾದರೂ ಪ್ರವಾಸ ಹೋಗಲು ಯೋಜಿಸುತ್ತಿದ್ದರೆ, ಇಂದು ಮಧ್ಯರಾತ್ರಿಯೊಳಗೆ ಟಿಕೆಟ್ ಬುಕ್ ಮಾಡುವುದು ಉತ್ತಮ. ಏಕೆಂದರೆ, ಏಪ್ರಿಲ್ 2, 2026 ರಿಂದ ಜಾರಿಗೆ ಬರುವಂತೆ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ತನ್ನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಇಂಧನ ದರವನ್ನು (Fuel Charges) ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ವಿಮಾನ ಇಂಧನ (Jet Fuel) ದರದಲ್ಲಿ ಶೇ. 130 ರಷ್ಟು ಏರಿಕೆಯಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ದೇಶೀಯ ವಿಮಾನ ಪ್ರಯಾಣದ ಹೊಸ ದರ ಪಟ್ಟಿ:
ಭಾರತ ಸರ್ಕಾರವು ಇಂಧನ ದರದ ಮೇಲೆ ಶೇ. 25 ರಷ್ಟು ಸಬ್ಸಿಡಿ ನೀಡುವ ಮೂಲಕ ಜನಸಾಮಾನ್ಯರಿಗೆ ಸ್ವಲ್ಪ ನಿರಾಳತೆ ನೀಡಿದೆ. ಆದರೂ, ಪ್ರಯಾಣಿಸುವ ದೂರದ ಆಧಾರದ ಮೇಲೆ ಪ್ರತಿ ಟಿಕೆಟ್ಗೆ ಈ ಕೆಳಗಿನಂತೆ ಹೆಚ್ಚುವರಿ ಇಂಧನ ಶುಲ್ಕ ಪಾವತಿಸಬೇಕಾಗುತ್ತದೆ:
-
0 – 500 ಕಿ.ಮೀ: ₹275
-
501 – 1,000 ಕಿ.ಮೀ: ₹400
-
1001 – 1,500 ಕಿ.ಮೀ: ₹600
-
1501 – 2,000 ಕಿ.ಮೀ: ₹800
-
2,000 ಕಿ.ಮೀ ಗಿಂತ ಹೆಚ್ಚು: ₹950
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾರಿ ಹೊರೆ:
ವಿದೇಶಕ್ಕೆ ಹೋಗುವವರಿಗೆ ಇಂಧನ ದರ ಏರಿಕೆಯ ಬಿಸಿ ತಟ್ಟಲಿದೆ. ಕಳೆದ 30 ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ಇಂಧನ ದರ ದುಪ್ಪಟ್ಟಾಗಿರುವುದರಿಂದ ಹೊಸ ದರಗಳು ಹೀಗಿವೆ:
-
ಯುರೋಪ್ ಮತ್ತು ಬ್ರಿಟನ್: ಪ್ರತಿ ಸೆಕ್ಟರ್ಗೆ ಅಂದಾಜು ₹10,000 ಹೆಚ್ಚಳ.
-
ಗಲ್ಫ್ ದೇಶಗಳು (GCC): ₹3,000 ದಿಂದ ₹5,000 ವರೆಗೆ ಹೆಚ್ಚಳ.
-
ಆಗ್ನೇಯ ಏಷ್ಯಾ ಮತ್ತು ಚೀನಾ: ₹3,500 ದಿಂದ ₹5,000 ವರೆಗೆ ಹೆಚ್ಚಳ.
-
ಆಫ್ರಿಕಾ: ಪ್ರತಿ ಸೆಕ್ಟರ್ಗೆ ₹5,000 ಫ್ಲಾಟ್ ಏರಿಕೆ.
ಬೆಲೆ ಏರಿಕೆಗೆ ಕಾರಣವೇನು?
ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ವಿಮಾನಯಾನ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಇಂಧನ ವೆಚ್ಚವೇ ಶೇ. 40 ರಷ್ಟಿರುತ್ತದೆ. ಈ ಭಾರಿ ಏರಿಕೆಯನ್ನು ಸಂಸ್ಥೆಯು ಭರಿಸಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಪ್ರಯಾಣಿಕರ ಮೇಲೆ ಈ ಹೊರೆಯನ್ನು ಹಾಕಲಾಗುತ್ತಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಸರ್ಕಾರವು ಸಮಯೋಚಿತವಾಗಿ ಮಧ್ಯಪ್ರವೇಶಿಸಿ ದೇಶೀಯ ಇಂಧನ ದರದ ಮೇಲೆ ವಿನಾಯಿತಿ ನೀಡದಿದ್ದರೆ, ಸಾಮಾನ್ಯ ಜನರಿಗೆ ವಿಮಾನ ಪ್ರಯಾಣ ಈ ತಿಂಗಳು ಸಂಪೂರ್ಣವಾಗಿ ಅಸಾಧ್ಯವಾಗುತ್ತಿತ್ತು” ಎಂದು ಸಂಸ್ಥೆ ಕೃತಜ್ಞತೆ ವ್ಯಕ್ತಪಡಿಸಿದೆ.
ಬಿಸಿಲಿನ ಬೇಗೆಯಿಂದ ಮನೆ ರಕ್ಷಿಸಲು ‘AC’ ಬೇಡ: ಈ 5 ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಸಾಕು!
ಲೇ-ಆಫ್ ಭೀತಿ ಬೇಡ, ಕೆರಿಯರ್ ಸ್ಟ್ರಾಂಗ್ ಮಾಡಿ: ವೃತ್ತಿಪರ ಯಶಸ್ಸಿಗೆ ಇಲ್ಲಿದೆ ಪಂಚಸೂತ್ರ | Career Tips








