ಬೆಂಗಳೂರು : GST ಯನ್ನು ಹೊರತುಪಡಿಸಿ ಕಾಮಗಾರಿ ಟೆಂಡರ್‌ಗಳನ್ನು ಕರೆಯುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖಿತ ಸುತ್ತೋಲೆಯಲ್ಲಿ ಕಾಮಗಾರಿಗಳ ಟೆಂಡರುಗಳನ್ನು ಕರೆಯುವ ಸಂದರ್ಭದಲ್ಲಿ GST ಮೊತ್ತವನ್ನು ಸ್ವಯಂ ಚಾಲಿತವಾಗಿ ತಂತ್ರಾಂಶದಲ್ಲಿಯೇ ಲೆಕ್ಕಹಾಕಿ ತೋರಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲು DPAR (e-Gov) ರವರಿಗೆ ನಿರ್ದಿಷ್ಟವಾದ ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಈ ಕುರಿತು ಟೆಂಡರ್‌ಗಳನ್ನು ಕರೆಯುವ ಮತ್ತು ಮೌಲ್ಯಮಾಪನ ಮಾಡುವ ಸಂದರ್ಭಗಳಲ್ಲಿ ಗೊಂದಲ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ವಿಷಯದ ಕುರಿತು ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ:
- ಈಗಾಗಲೇ ಸರ್ಕಾರದಿಂದ UniSR ಅಳವಡಿಕೆ ಬಗ್ಗೆ ನೀಡಲಾದ ಸರ್ಕಾರದ ಆದೇಶದಲ್ಲಿನ ನಿರ್ದೇಶನಗಳಂತೆ ಅಂದಾಜು ಪಟ್ಟಿಯಲ್ಲಿ GST ಮೊತ್ತವನ್ನು ಪ್ರತ್ಯೇಕವಾಗಿ ಸೇರ್ಪಡೆ ಮಾಡಬೇಕಾಗಿದ್ದು, ಅದನ್ನು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಲೆಕ್ಕಹಾಕಿ ತೋರಿಸಲು DPAR(e-gov) ನಿಂದ ಕ್ರಮವಹಿಸತಕ್ಕದ್ದು.
- ಸರ್ಕಾರದಿಂದ ಈಗಾಗಲೇ ಅನುಮೋದಿಸಲಾದ ಏಕರೂಪ ಅನುಸೂಚಿ ದರಗಳ (UniSR) ಅನ್ವಯ ತಯಾರಿಸಲಾದ ಅಂದಾಜು ಪಟ್ಟಿಯಲ್ಲಿ GST ಮೊತ್ತವನ್ನು ಹೊರತುಪಡಿಸಿ ಟೆಂಡರ್‌ಗಿಟ್ಟ ಮೊಬಲಗನ್ನು (Amount put to tender) ನಿಗದಿಪಡಿಸಿ, ಸದರಿ ಮೊತ್ತಕ್ಕೆ ಟೆಂಡರ್ ಆಹ್ವಾನಿಸುವುದು.
- ಗುತ್ತಿಗೆದಾರರು ಟೆಂಡರ್‌ಗಿಟ್ಟ ಮೊಬಲಗಿಗೆ ಎದುರಾಗಿ ಟೆಂಡರ್‌ನಲ್ಲಿ GST ಹೊರತುಪಡಿಸಿ ನೀಡುವ ದರಗಳನ್ನು ತುಲನೆ ಮಾಡಿ L1 ಟೆಂಡರುದಾರರನ್ನು ನಿರ್ಧರಿಸಲು ತಂತ್ರಾಂಶದಲ್ಲಿ ಕ್ರಮವಹಿಸುವುದು.
- ಗುತ್ತಿಗೆದಾರನಿಂದ ಪಡೆಯಲಾಗುವ EMD, Performance Guarantee/Security Deposit ಮುಂತಾದವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲ್ಕಂಡಂತೆ ನಿಗದಿಪಡಿಸಲಾದ ಟೆಂಡರ್‌ಗಿಟ್ಟ ಮೊಬಲಗನ್ನು ಮಾತ್ರ ಪರಿಗಣಿಸುವುದು.
- ಈ ರೀತಿಯಾಗಿ ಟೆಂಡರ್‌ಗಿಟ್ಟ ಮೊಬಲಗು ಮತ್ತು GST ಮೊಬಲಗು ಸೇರಿದಂತೆ ಒಟ್ಟಾರೆ ಮೊತ್ತವು ಆಡಳಿತಾತ್ಮಕ ಅನುಮೋದನೆ ನೀಡಿದ ಮೊತ್ತವನ್ನು ಮೀರದಿರುವುದನ್ನು ಆಯಾ ಸಂಗ್ರಹಣಾ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳತಕ್ಕದ್ದು.
- ಗುತ್ತಿಗೆದಾರರೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ, ಒಪ್ಪಂದದ ಮೊತ್ತ ಮತ್ತು ಅದರ ಮೇಲಿನ GST ಮೊತ್ತವನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು. ಮುಂದುವರೆದು, ಒಪ್ಪಂದದ ಚಾಲ್ತಿ ಅವಧಿಯಲ್ಲಿ GST ದರಗಳು ಪರಿಷ್ಕರಣೆಯಾದಲ್ಲಿ ಅದರನ್ವಯ ಪಾವತಿ / ಹಿಂಪಾವತಿ ಮಾಡಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರರಾಗಿರುತ್ತಾರೆ ಎಂಬ ಅಂಶವನ್ನು ಒಪ್ಪಂದದಲ್ಲಿ ಸೇರ್ಪಡೆ ಮಾಡತಕ್ಕದ್ದು.
ಮೇಲಿನ ಸೂಚನೆಗಳನ್ನು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳತಕ್ಕದ್ದು.