ಕೊಪ್ಪಳ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಬಹಳಷ್ಟು ಸಹಕರಿಯಾಗಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ಅವರು ಬುಧವಾರ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾ.ಪಂ ವ್ಯಾಪ್ತಿಯ ಹಂಚಿನಾಳ ಗ್ರಾಮದ ಗ್ರಾಮಸ್ಥರೊಂದಿಗೆ ಗೃಹಲಕ್ಷ್ಮಿ ಯೋಜನೆ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಸಂಬಂಧ ಮುಕ್ತವಾಗಿ ಚರ್ಚೆ ನಡೆಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ನಮ್ಮ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿಯೇ ಅನುಷ್ಠಾನ ಮಾಡಿದೆ. ಪ್ರಮುಖವಾಗಿ ಅನ್ನ ಭಾಗ್ಯ ಯೋಜನೆಯಲ್ಲಿ 5ಕೆಜಿ ಅಕ್ಕಿ ಜತೆಗೆ 170ಹಣವನ್ನ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಿದೆ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ಕನಸಿನನಂತೆ ದೇಶದ ಅಭಿವೃದ್ಧಿ ಯಾಗಬೇಕಾದರೆ, ಆ ದೇಶದ ಮಹಿಳೆಯರು ಮತ್ತು ಯುವಕರ ಸಬಲೀಕಾರಣದಿಂದ ಮಾತ್ರ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ತಮ್ಮ ಮನೆಯನ್ನು ನಿಭಾಯಿಸಲು ಬಹಳಷ್ಟು ಉಪಯುಕ್ತವಾಗಿದ್ದು, ಈ ಯೋಜನೆಯ ಹಣವನ್ನು ಉಳಿತಾಯ ಮಾಡಿಕೊಂಡು ಸ್ವಯಂ ಉದ್ಯೋಗ ಮಾಡುವ ಕೊಪ್ಪಳ ಜಿಲ್ಲೆಯ ಮಹಿಳೆಯರ ಆಸಕ್ತಿಯು ತುಂಬಾ ಹೆಮ್ಮೆಯಾಗಿದೆ. ನಮ್ಮ ರಾಜ್ಯದಲ್ಲಿ ಶೇ.12 ರಷ್ಟು ಸ್ವಯಂ ಉದ್ಯೋಗ ಹೆಚ್ಚಾಗಿದ್ದು, ಕೆಲವರು ಬಟ್ಟೆ ಅಂಗಡಿ, ಜೆರಾಕ್ಸ್ ಸೆಂಟರ್, ಹೀಗೆ ಹಲವಾರು ಸ್ವಯಂ ಉದ್ಯೋಗವನ್ನ ಮಾಡುತ್ತಿದ್ದಾರೆ. ಇದರಿಂದ ಜನರಿಗೂ ಅನುಕೂಲವಾಗುತ್ತಿದೆ. ಇದರ ಜೊತೆಗೆ ಯಾರಿಗೆ ಯೋಜನೆಯ ಉಪಯೋಗ ದೊರೆಯುತ್ತಿಲ್ಲ, ಅವರಿಗೂ ಈ ಯೋಜನೆಗಳ ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದರು.
ಹಂಚಿನಾಳ ಗ್ರಾಮದ ಮುದುಕಮ್ಮ ಮೌಲಪ್ಪ ಮಾದರ್ ಎಂಬ ಮಹಿಳೆಯು ಗೃಹಲಕ್ಷ್ಮಿ ಹಣದಿಂದ ಒಂದು ಹಸು ಪಡೆದು, ಹಾಲನ್ನು ಮಾರಿ, ಪ್ರತಿ ತಿಂಗಳಿಗೆ 9 ಸಾವಿರ ದುಡಿಯುತ್ತಿದ್ದಾರೆ. ಇದರ ಜೊತೆಗೆ ಗೃಹಲಕ್ಷ್ಮಿಯ 2 ಸಾವಿರ ಸೇರಿ ಒಂದು ತಿಂಗಳಿಗೆ 10 ರಿಂದ 12 ಸಾವಿರ ಹಣ ಸಂಪಾದಿಸುತಿದ್ದಾರೆ. ಹಾಗೆ ಗಂಗಮ್ಮ ದೊಡ್ಡಯ್ಯ ಹಿರೇಮಠ್ ರವರು, ಗೃಹಲಕ್ಷ್ಮಿ ಹಣದಿಂದ ಹೊಸದಾಗಿ ಬಟ್ಟೆ ಅಂಗಡಿಯನ್ನ ತೆಗೆದು ಸ್ವಯಂ ಉದ್ಯೋಗವನ್ನು ಪ್ರಾರಂಭ ಮಾಡಿರುವುದು ತುಂಬಾ ಸಂತೋಷವಾಗಿದೆ. ಶಕ್ತಿ ಯೋಜನೆಯನ್ನ ಉಪಯೋಗಿಸಿಕೊಂಡು ಮಹಿಳೆಯರು, ವಿವಿಧ ದೇವಸ್ಥಾನಗಳ ವೀಕ್ಷಣೆಗೆ ತೆರಳುತ್ತಿದ್ದಾರೆ. ಇದರಿಂದ ಸಣ್ಣ ಸಣ್ಣ ವ್ಯಾಪಾರವು ಆಗುತ್ತದೆ. ಚಿಕ್ಕ ವ್ಯಾಪಾರದಿಂದ ಹೆಚ್ಚಿನ ಜಿಎಸ್ಟಿ ಸಂಗ್ರಹಣೆಯಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಯಾವಾಗ ಮಹಿಳೆಯರು ಸ್ವಯಂ ಅಭಿವೃದ್ಧಿಯಾಗುತಾರೆ, ಅವಾಗ ಹಳ್ಳಿ, ರಾಜ್ಯ, ದೇಶದ ಅಭಿವೃದ್ಧಿಯಾಗುತ್ತದೆ. ವಿಷೇಶವಾಗಿ ಯುವಕರು, ಮಹಿಳೆಯರು ಯಾವಾಗ ಸ್ವಯಂ ಉದ್ಯೋಗವಂತರಗುತ್ತಾರೆ, ಅವಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಅವರು ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿವೆಯೇ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣದಿಂದ ಹಸು ತಂದು ಹೈನುಗಾರಿಕೆ ಪ್ರಾರಂಭಿಸಿರುವುದು, ಬಟ್ಟೆ ಅಂಗಡಿ ತೆರೆದಿದ್ದು ಹಾಗೂ ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಿರುವುದು ಮತ್ತು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮೂಲಕ ವಿವಿಧ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳನ್ನು ನೋಡೊರುವ ಬಗ್ಗೆ ಮಹಿಳಾ ಫಲಾನುಭವಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗೃಹಲಕ್ಷ್ಮಿ ಹಣದಿಂದ ಫಲಾನುಭವಿ ಆರಂಭಿಸಿರುವ ಬಟ್ಟೆ ಅಂಗಡಿಗೆ ಭೇಟಿ: ಹಂಚಿನಾಳ ಗ್ರಾಮದ ಗಂಗಮ್ಮ ದೊಡ್ಡಯ್ಯ ಹಿರೇಮಠ ಎಂಬುವವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ಮನೆಯಲ್ಲೇ ಆರಂಭಿಸಿರುವ ಬಟ್ಟೆ ಅಂಗಡಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ಭೇಟಿ ನೀಡಿ, ಅಂಗಡಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಬಳಿಕ ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಾಗರಜ ಅರಳಿ ಹಾಗೂ ಅಮರೇಶ ಗಾಂಜಿ, ಕುಷ್ಟಗಿ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಫಾರೂಖ್ ದಲಾಯತ್, ಜಿಲ್ಲಾ ಸಮಿತಿ ಸದಸ್ಯರಾದ ಶಾರದಾ ಕಟ್ಟಿಮನಿ, ಕುಷ್ಟಗಿ ತಾ.ಪಂ ಇಓ ಪಂಪಾಪತಿ ಹಿರೇಮಠ ಸೇರಿದಂತೆ ತಾಲ್ಲೂಕು ಸಮಿತಿ ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.