ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ 20ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಖಾಸಗಿ ವಿಧೇಯಕ ಸೇರಿದಂತೆ ಒಟ್ಟು 15 ವಿಧೇಯಕಗಳು ಮಂಡನೆಯಾಗಲಿವೆ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನಕ್ಕೆ ನೇಮಕಾತಿ ಅಧಿಕಾರ ರಾಜ್ಯಪಾಲರಿಂದ ಸಿಎಂಗೆ ನೀಡುವ ವಿಧೇಯಕ, ಗಣಿ ಇಲಾಖೆಯಲ್ಲಿ ಹೊಸ ತೆರಿಗೆ ಪ್ರಸ್ತಾಪ ಸೇರಿ ಹಲವು ವಿಧೇಯಕಗಳು, ತಿದ್ದುಪಡಿ ವಿಧೇಯಕಗಳು ಸೇರಿ ಒಟ್ಟು 15 ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ಆದ್ಯಾದೇಶ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆದ್ಯಾದೇಶ 2024 ಗಳಿಗೆ ಒಪ್ಪಿಗೆ ಪಡೆಯಲಾಗುವುದು.
ಇನ್ನು ದರ್ಶನ್ ಪುಟ್ಟಣ್ಣಯ್ಯ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಖಾಸಗಿ ವಿಧೇಯಕ ಮಂಡಿಸುವರು. ಎಂ.ವೈ. ಪಾಟೀಲ ಅವರಿಂದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಹೆಚ್.ಕೆ. ಸುರೇಶ್ ಅವರಿಂದ ಬೇಲೂರು ಹಳೇಬೀಡು ವಿಶ್ವ ಪರಂಪರೆಯ ಪ್ರದೇಶ ನಿರ್ವಹಣೆ ಪ್ರಾಧಿಕಾರ ವಿಧೇಯಕ ಮಂಡಿಸಲಾಗುವುದು.
ಈ ಬಾರಿಯ ಚಳಿಗಾಲ ಅಧಿವೇಶನ ಬಿಸಿ ಬಿಸಿ ಚರ್ಚೆ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ವಕ್ಫ್ ಆಸ್ತಿ ವಿವಾದ ಚರ್ಚೆಗೆ ಪ್ರಮುಖ ಬಿಂದುಗಳಾಗಬಹದು. ವಕ್ಫ್ ವಿವಾದ, ಪಡಿತರ ಚೀಟಿ ಗೊಂದಲ, ಮುಡಾ ಹಗರಣ ಸೇರಿ ಸಾಲು ಸಾಲು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳು ವಿಪಕ್ಷಗಳು ಸಜ್ಜಾಗಿವೆ.
ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿವೆ. ಹಾಗೇ ಉತ್ತರ ಕರ್ನಾಟಕದ ಜಲ್ವಂತರ ಸಮಸ್ಯೆಗಳಾದ ಮೂಲಭೂತ ಸೌಕರ್ಯದ ವಿಚಾರಕ್ಕೆ ಈ ಬಾರಿಯಾದರೂ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ.