ಬೆಂಗಳೂರು: ರಾಜ್ಯದ ಜನರು ಕೃಷಿ ಭೂಮಿಯಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡಲು ಸರ್ಕಾರ ಮಾರ್ಗಸೂಚಿ ನಿಗದಿ ಪಡಿಸಿದೆ. ಆ ಮಾರ್ಗಸೂಚಿ ಅನುಸರಿಸಿಯೇ ನಿರ್ಮಾಣ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95(1)ರ ಪರಂತುಕದಲ್ಲಿ ಕೃಷಿಕರು ಕೃಷಿ ಭೂಮಿಯ ಒಟ್ಟು ವಿಸ್ತೀರ್ಣದ ಶೇಕಡ 10 ರಷ್ಟು ಮೀರದ ಜಾಗದಲ್ಲಿ ಫಾರಹೌಸ ಕಟ್ಟಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಸದರಿ ಫಾರ್ ಹೌಸ್‌ಅನ್ನು ಕೃಷಿಕರ ಹಾಗೂ ಅವರ ಕುಟುಂಬದ ವಾಸ್ತವ್ಯಕ್ಕಾಗಿ ಹಾಗೂ ಕೃಷಿ ಸಲಕರಣೆಗಳನ್ನು ಇಟ್ಟುಕೊಳ್ಳುವ ಸಲುವಾಗಿ ಮಾತ್ರ ಉಪಯೋಗಿಸತಕ್ಕದ್ದಾಗಿರುತ್ತದೆ. ಮುಂದುವರೆದು, ಸದರಿ ‘ ಫಾರಹೌಸ್ ಅನ್ನು ಬಾಡಿಗೆ ನೀಡಲಾಗಲೀ ಹಾಗೂ ಇತರೆ ವಾಣಿಜ್ಯ ಉದ್ದೇಶಕ್ಕಾಗಲೀ ಬಳಸಲು ಅವಕಾಶವಿರುವುದಿಲ್ಲ. ಕೃಷಿಕರು ಕೃಷಿ ಭೂಮಿಯಲ್ಲಿನ ಫಾರಹೌಸ್ ಎಂದು ಪರಿಗಣಿಸುವ ಆಸ್ತಿಗಳಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಸೂಚನೆಗಳನ್ನು ಅನುಸರಿಸುವಂತೆ ಈ ಮೂಲಕ ತಿಳಿಸಲಾಗಿದೆ:-
1. ಆರ್.ಟಿ.ಸಿ ಯಂತ ಭೂಮಿಯ ಮಾಲೀಕರು ಹೊಂದಿರುವ ವ್ಯವಸಾಯ ಜಮೀನಿನ ಗರಿಷ್ಠ ಶೇ.10 ರಷ್ಟು ಜಮೀನಿನಲ್ಲಿ (ಬಿ’ ಖರಾಬು ಜಮೀನನ್ನು ಹೊರತುಪಡಿಸಿ) ಫಾರಂ ಹೌಸ್, ಭಾವಿ ಅಥವಾ ತೊಟ್ಟಿ ಇತ್ಯಾದಿಯನ್ನು ನಿರ್ಮಾಣ ಮಾಡಲು ಲಿಖಿತ ರೂಪದಲ್ಲಿ ತಮ್ಮ ಇಚ್ಚೆಯನ್ನು ಕಂದಾಯ ನಿರೀಕ್ಷಕರಿಗೆ ವ್ಯಕ್ತಪಡಿಸಬಹುದಾಗಿದೆ.
2. ಆರ್.ಟಿ.ಸಿಯಲ್ಲಿ ಭೂಮಾಲೀಕರ ಇಚ್ಛೆಯಂತೆ (ಸೂಚಿಸಲಾಗಿರುವ 10% ಮಿತಿಗೊಳಪಟ್ಟು) ಫಾರಂ ಹೌಸ್, ಭಾವಿ ಅಥವಾ ತೊಟ್ಟಿಯ ನಿರ್ಮಾಣದ ವಿವರವನ್ನು ಕಲಂ IIರಲ್ಲಿ ನಮೂದಿಸಲು ಅನುವಾಗುವಂತೆ ಭೂಮಿ ತಂತ್ರಾಂಶದಲ್ಲಿ ಕಂದಾಯ ನಿರೀಕ್ಷಕರ ಲಾಗಿನ್‌ನಲ್ಲಿ ಹೊಸ ಸೇವೆಯನ್ನು ಸೇರಿಸಲಾಗುತ್ತಿದೆ.
3. ಈ ನಿರ್ಮಾಣವು ಸಂದರ್ಭೋಚಿತವಾಗಿದ್ದು, ಉತ್ತಮ ಸಾಗುವಳಿಗಾಗಿ ಅಥವಾ ವ್ಯವಸಾಯ – ಉಪಯೋಗಕ್ಕಾಗಿದ್ದು, ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿರದ ಕಾರಣ ಮತ್ತು ಯಾವುದೇ ಪರಿವರ್ತನೆಯಾಗಿರದ ಕಾರಣ, ಈ ನಿರ್ಮಾಣಕ್ಕೆ ಪ್ರತ್ಯೇಕವಾದ ಗ್ರಾಮ ಪಂಚಾಯಿತಿ/ಮುನಿಸಿಪಾಲಿಟಿಯವರು ಆಸ್ತಿ, ಸಂಖ್ಯೆಯನ್ನು ರಚಿಸತಕ್ಕದ್ದಲ್ಲ.
4. ಪ್ರಸ್ತಾಪಿತ ಫಾರ್ಮಹೌಸ್ ಭಾಗದ ಆಸ್ತಿಯನ್ನು ಯಾವುದೇ ವ್ಯವಹಾರ ಅಥವಾ ಮಾರಾಟ ಮಾಡಬೇಕಾದ ಸಂದರ್ಭದಲ್ಲಿ ಅಥವಾ ಗ್ರಾಮ ಪಂಚಾಯಿತಿ/ಮುನಿಸಿಪಲ್ ಆಸ್ತಿ ಸಂಖ್ಯೆಯನ್ನು ನೀಡಬೇಕಾಗಿದ್ದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ನಿಯಮ 95ರಡಿ ಭೂ ಪರಿವರ್ತನೆಯು ಕಡ್ಡಾಯವಾಗಿರುತ್ತದೆ,
5: ಫಾರಂ ಹೌಸ್, ಭಾವಿ ಅಥವಾ ತೊಟ್ಟಿ ಇತ್ಯಾದಿ ನಿರ್ಮಾಣವು ಇತರೆ ಸಂಬಂಧಿಸಿದ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ.
6. ಮೇಲಿನ ಸೂಚನೆಗಳನ್ನು ಭೂಮಿ ತಂತ್ರಾಂಶದಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸುವಂತೆ ಸೂಚಿಸಲಾಗಿದೆ.