ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವ ಸಂದರ್ಭದಲ್ಲಿ ಸಿಂಧುತ್ವ ಪ್ರಮಾಣ ಪತ್ರದ ಅವಶ್ಯಕತೆಯ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138) ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ನ್ನು ರಚಿಸಲಾಗಿದ್ದು, ಈ ನಿಯಮಗಳು ದಿನಾಂಕ:13.09.1996ರಿಂದ ಜಾರಿಗೆ ಬಂದಿರುತ್ತವೆ. ಈ ನಿಯಮಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ದಿನಾಂಕ: 09.04.2021ರ ಅಧಿಸೂಚನೆ ಸಂಖ್ಯೆ: ಸಿಆಸುಇ 26 ಸೇಅನೇ 2018ರಲ್ಲಿ 1996ರ ಸದರಿ ನಿಯಮಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ:12.11.2024ರ ಉಲ್ಲೇಖ (1) ರ ಸುತ್ತೋಲೆಯಲ್ಲಿ ಮತ್ತು ದಿನಾಂಕ:13.01.2025ರ ಉಲ್ಲೇಖ (2)8 ಸುತ್ತೋಲೆಯಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ 4 ನ್ನು ನಿಯಮ 8 ರೊಂದಿಗೆ ಸಹವಾಚನ ಮಾಡಿಕೊಂಡಂತೆ, ಇವುಗಳನ್ವಯ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಸಂಬಂಧಿಸಿದ ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿಯ ಮುಖಾಂತರ ಭರ್ತಿ ಮಾಡುವ ಅರ್ಹತೆಯ ಆಧಾರದ ಮೇಲೆ ಜಾರಿಯಲ್ಲಿರುವ ಮೀಸಲಾತಿಯನ್ನು ಅನುಸರಿಸಿ(on the basis of merit-cum-reservation) ಮಾಡತಕ್ಕದ್ದಾಗಿದೆ. ಆದರೆ, ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996, ಈ ನಿಯಮಗಳನ್ವಯ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ನಿಗದಿತ ವಿದ್ಯಾರ್ಹತೆಯನ್ನು ಹೊಂದಿದ್ದಾನೆಯೇ ಮತ್ತು ಗೊತ್ತುಪಡಿಸಿದ ವಯೋಮಿತಿಯೊಳಗೆ ಇದ್ದಾನೆಯೇ ಎಂಬುದನ್ನು ಮಾತ್ರ ಪರಿಗಣಿಸಲಾಗುತ್ತದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಾಗ ಅಂತರ ಅರ್ಹತೆ (relative merit) ಯನ್ನು ನೋಡುವುದಿಲ್ಲ ಮತ್ತು ಮೀಸಲಾತಿಯನ್ನು ಅನುಸರಿಸುವುದಿಲ್ಲ. ಆದುದರಿಂದ, ಈ ವಿಧಾನವು ಒಂದು ವಿಶೇಷವಾದ ನೇಮಕಾತಿಯಾಗಿರುತ್ತದೆ.
ಅಲ್ಲದೆ, 1996 ರ ಸದರಿ ನಿಯಮಗಳ ನಿಯಮ 4 ರ ಉಪ ನಿಯಮ (5) ರಲ್ಲಿ “(5) Appointment shall be made only against a direct recruitment vacancy” w ಗೊತ್ತುಪಡಿಸಲಾಗಿರುತ್ತದೆ. ಅದರಂತೆ, ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬಹುದಾದ ವೃಂದಗಳ ಹುದ್ದೆಗಳಿಗೆ ನೇಮಕಾತಿ ಮಾಡಲು ನೇರ ನೇಮಕಾತಿ ಮತ್ತು ಮುಂಬಡ್ತಿಯ ವಿಧಾನವನ್ನು ಗೊತ್ತುಪಡಿಸಿ, ಅನುಪಾತವನ್ನು ನಿಗದಿಪಡಿಸಿದ್ದಲ್ಲಿ, ಅದಕ್ಕೆ ಅನುಗುಣವಾಗಿ, ಹುದ್ದೆಗಳನ್ನು / ರಿಕ್ತಸ್ಥಾನಗಳನ್ನು ನೇರ ನೇಮಕಾತಿ ಹುದ್ದೆಗಳು / ರಿಕ್ತಸ್ಥಾನಗಳು ಮತ್ತು ಮುಂಬಡ್ತಿ ಹುದ್ದೆಗಳು / ರಿಕ್ತಸ್ಥಾನಗಳು ಎಂದು ವರ್ಗೀಕರಣ ಮಾಡಿ ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳನ್ನು ನೇರ ನೇಮಕಾತಿಗೆ ವರ್ಗೀಕರಿಸಿದ ಹುದ್ದೆಗಳಿಗೆ / ರಿಕ್ತಸ್ಥಾನಗಳಿಗೆ ಎದುರಾಗಿ ಮಾತ್ರ ಪರಿಗಣಿಸಬೇಕಾಗುತ್ತದೆ. ಈ ರೀತಿ, ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳನ್ನು ನೇರ ನೇಮಕಾತಿಗೆ ವರ್ಗೀಕರಿಸಿದ ಹುದ್ದೆಗಳಿಗೆ / ರಿಕ್ತ ಸ್ಥಾನಗಳಿಗೆ ಎದುರಾಗಿ ಪರಿಗಣಿಸಿದ ಮಾತ್ರಕ್ಕೆ ಆ ನೇಮಕಾತಿಗಳು ನೇರ ನೇಮಕಾತಿ ಆಗುವುದಿಲ್ಲ. ಆದುದರಿಂದ, ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳಿಗೆ ಮೀಸಲಾತಿ ನೀತಿಯನ್ನು ಅನುಸರಿಸುವ ಸಂದರ್ಭ ಒದಗಿಬರುವುದಿಲ್ಲ.
ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದವರು ಮೀಸಲಾತಿ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ, ಅವರು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದ ನಂತರ, ಸಂವಿಧಾನದ ಅನುಚ್ಛೇದ 16 ರ ಖಂಡ (4-ಎ) ರಡಿ ಸರ್ಕಾರವು ನಿಗದಿಪಡಿಸಿರುವ ಮೀಸಲಾತಿಯ ಪ್ರಕಾರ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮುಂಬಡ್ತಿ ಮೂಲಕ ನೇಮಕಾತಿಯನ್ನು ಹೊಂದಲು ಅವರು ಮೀಸಲಾತಿ ಸೌಲಭ್ಯವನ್ನು ಕೋರಬಹುದಾಗಿರುತ್ತದೆ. ಆದರೆ, ಅಂತಹ ಸಂದರ್ಭದಲ್ಲಿ ಆ ನೌಕರನು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಅಭ್ಯರ್ಥಿಯು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಇತರೆ ರೀತಿಯಲ್ಲಿ ಅರ್ಹರಾಗಿದ್ದಲ್ಲಿ, ಮೀಸಲಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರವನ್ನು ಒದಗಿಸುವಂತೆ ಅವರನ್ನು ಒತ್ತಾಯಿಸದೇ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸಬಹುದಾಗಿರುತ್ತದೆ ಎಂದು ಎಲ್ಲಾ ಇಲಾಖೆ/ ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಸೂಚಿಸಲಾಗಿದೆ.









