ಬೆಂಗಳೂರು: ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಅಥವಾ ಇತರ ಪದವಿಗಳನ್ನು ನೀಡುವ ವಿಚಾರದಲ್ಲಿ ಸ್ವತಂತ್ರವಾಗಿದ್ದು, ಅಂತಹ ವಿಷಯಗಳಲ್ಲಿ ನ್ಯಾಯಾಲಯವು ಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಡಾ. ಎಚ್. ಸಿ. ಸತ್ಯನ್ ಅವರಿಗೆ ‘ನಾಡೋಜ’ ಪದವಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ಡಾ. ಎಚ್. ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ‘ನಾಡೋಜ’ ಪದವಿ ನೀಡಿತ್ತು. ಈ ಪದವಿ ಪ್ರದಾನವನ್ನು ಪ್ರಶ್ನಿಸಿ ‘ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ’ ಸಂಸ್ಥೆಯ ಅಧ್ಯಕ್ಷರಾದ ಎಸ್. ಶಿವಕುಮಾರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಯಾರಿಗೆ ಯಾವ ಪದವಿ ಕೊಡಬೇಕು ಎಂಬುದು ವಿಶ್ವವಿದ್ಯಾನಿಲಯದ ವಿವೇಚನೆಗೆ ಬಿಟ್ಟಿದ್ದು. ಇಂತಹ ಶೈಕ್ಷಣಿಕ ಅಥವಾ ಗೌರವದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯ ಬಯಸುವುದಿಲ್ಲ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ಸತ್ಯನ್ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಭ್ರಷ್ಟಾಚಾರ ಸಾಬೀತಾಗಿದೆಯೇ? ಇಲ್ಲದಿದ್ದರೆ ಇಂತಹ ಆರೋಪಗಳನ್ನು ಹೊರಿಸಿದ್ದಕ್ಕಾಗಿ ದಂಡ ವಿಧಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿತು.








