ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮಪಂಚಾಯಿತಿ ಬಿ ಖಾತಾ ಆಸ್ತಿಗೆ ತೆರಿಗೆ ವಿಧಿಸುವ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಗ್ರಾ.ಪಂ. ವ್ಯಾಪ್ತಿಗಳಲ್ಲಿ ತೆರಿಗೆ ವ್ಯಾಪ್ತಿಗೊಳಪಡದ (ಬಿ ಖಾತಾ-199ಸಿ) ಆಸ್ತಿಗಳನ್ನು ಪತ್ತೆ ಮಾಡಿ, ಅವುಗಳಿಂದಲೂ ತೆರಿಗೆ, ಶುಲ್ಕವಸೂಲಿ ಮಾಡುವುದು ಹಾಗೂ ಎಲ್ಲ ಗ್ರಾಪಂಗಳಲ್ಲೂ ಏಕರೂಪ ತೆರಿಗೆ, ಶುಲ್ಕ ವಿಧಿಸಲಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಬದ್ದ ವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಸುಗಳು) ಕರಡು ನಿಯಮ 2025ನ್ನು ರೂಪಿಸಿ ರಾಜ್ಯ ಸರ್ಕಾರ ಪ್ರಕಟಿಸಿದೆ.
ಕರಡು ನಿಯಮದ ಪ್ರಕಾರ, ಗ್ರಾ.ಪಂ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಶುಲ್ಕ ವಿಧಿಸಿ, ನಂತರ ಅನುಮತಿ ನೀಡುವಂತೆ ಸೂಚಿಸಲಾಗಿದೆ. ಅದರೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ವಸತಿ, ವಸತಿಯೇತರ ಕಟ್ಟಡ, ವಾಣಿಜ್ಯ ಉದ್ದೇಶದ ಭೂಮಿ ಸೇರಿದಂತೆ ಇನ್ನಿತರ ಎಲ್ಲ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಿ, ನೋಂದಣಿ ಮಾಡುವಂತೆಯೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ವಸತಿ, ವಾಣಿಜ್ಯ ಕಟ್ಟಡಗಳು, ನಿವೇಶನ, ವಾಣಿಜ್ಯ ಉದ್ದೇಶದ ಭೂಮಿ, ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ), ಮೊಬೈಲ್ ಟವರ್ ಸೇರಿದಂತೆ ಇನ್ನಿತರ ಆಸ್ತಿಗಳಿಗೆ ಪ್ರತ್ಯೇಕ ತೆರಿಗೆ ಮತ್ತು ಶುಲ್ಕಗಳನ್ನು ನಿಗದಿ ಮಾಡಲಾಗಿದೆ. ನೂತನ ಕರಡು ನಿಯಮಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅದಾದ ನಂತರ ಆಕ್ಷೇಪಣೆಗಳನ್ನು ಗಮನಿಸಿ ನಿಯಮದಲ್ಲಿ ಬದಲಾವಣೆ ತಂದು ಅಂತಿಮ ನಿಯಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.