ಬೆಂಗಳೂರು : ರಾಜ್ಯ ಸರ್ಕಾರವು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗಾಗಿ ಕರ್ನಾಟಕ ಮೋಟಾರ್ ವಾಹನ (ತಿದ್ದುಪಡಿ) ನಿಯಮಗಳು 2025ರ ಅಡಿ ರಚಿಸಲಾಗಿದ್ದ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ ಜಾರಿ ಸಂಬಂಧ ರಾಜ್ಯ ಪತ್ರ ಹೊರಡಿಸಿದೆ.
ಈ ಸಮಿತಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಇರಲಿದ್ದಾರೆ. ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನು ಅರ್ಹತೆಯ ನಿವೃತ್ತ ಕಾರ್ಯದರ್ಶಿ, ಇನ್ನೊಬ್ಬರು ಕೈಗಾರಿಕಾ ಅಥವಾ ಹಣಕಾಸು ತಜ್ಞರಾಗಿರಲಿದ್ದಾರೆ.
ಸಾರಿಗೆ ಸಂಸ್ಥೆಗಳನ್ನು ಅರ್ಥಿಕವಾಗಿ ಬಲಪಡಿಸಲು ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿ ಸೆ.9ರಂದು ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಅದರಂತೆ ಬಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಿ ಇದೀಗ ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.









