ಬೆಂಗಳೂರು : 2025-26 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ ಕುರಿತಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸನ್ 2025-26 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಸದರಿ ಆದೇಶದಂತೆ, ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ (Working Strength) ಶೇ. 6 ನ್ನು (6%) ಮೀರದಂತೆ ದಿನಾಂಕ:15-05-2025 ರಿಂದ ದಿನಾಂಕ: 14-06-2025 ವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್ ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ.
ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆಯ ಈ ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೋಧಕೇತರ ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆ ಮಾಡುವ ಕುರಿತು ಆಯಾ ನೇಮಕಾತಿ ಪ್ರಾಧಿಕಾರದ ಹಂತದಲ್ಲಿ ಕ್ರಮವಹಿಸಬೇಕಾಗಿರುವುದರಿಂದ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.
> ಕೋರಿಕೆ ವರ್ಗಾವಣೆ ಬಯಸುವ ಬೋಧಕೇತರ ವೃಂದದ ನೌಕರರು ತಮ್ಮ ಕಛೇರಿಯ ಮುಖ್ಯಸ್ಥರಿಗೆ ವರ್ಗಾವಣೆ ಅರ್ಜಿ ನಮೂನೆ-01ರಲ್ಲಿ ಭರ್ತಿ ಮಾಡಿ ಸಲ್ಲಿಸುವುದು. ನಿಕಟ ಮೇಲಾಧಿಕಾರಿಯು ಲಭ್ಯವಿರುವ ದಾಖಲೆಗಳನ್ನು ನೌಕರರ ಸೇವಾ ವಿವರಗಳೊಂದಿಗೆ ಪರಿಶೀಲಿಸಿ, ಭರ್ತಿ ಮಾಡಿರುವ ಮಾಹಿತಿಯು ಸರಿ ಇರುವ ಬಗ್ಗೆ ದೃಢೀಕರಿಸುವುದು. ಈ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅರ್ಜಿದಾರರ ನಿಕಟ ಮೇಲಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯಸ್ಥರು ಈ ರೀತಿ ಪರಿಶೀಲಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಸಲ್ಲಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿ ಉಪನಿರ್ದೇಶಕರ ಕಛೇರಿಗೆ ಖುದ್ದಾಗಿ ನೀಡಿ ತದನಂತರ ಉಪನಿರ್ದೇಶಕರು ತಮ್ಮ ವ್ಯಾಪ್ತಿಗೆ ಬಾರದ ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ತಲುಪಿಸಲು ಕ್ರಮ ವಹಿಸುವುದು. ಅರ್ಜಿಯ ಮೇಲೆ ಅವರ ನಿಕಟ ಅಧಿಕಾರಿ ಮತ್ತು ನಿಕಟ ಅಧಿಕಾರಿಯ ಮೇಲಿನ ಅಧಿಕಾರಿಯವರು (ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು) ದೃಢೀಕರಿಸುವುದು ಕಡ್ಡಾಯ. ಈ ರೀತಿ ದೃಢೀಕರಿಸಲ್ಪಟ್ಟ ಅರ್ಜಿಗಳು ಮಾತ್ರ ಪರಿಗಣಿಸಲ್ಪಡುತ್ತವೆ. ವ್ಯತ್ಯಾಸಗಳಿಗೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
> ಪರಸ್ಪರ ವರ್ಗಾವಣೆಗೆ ಅರ್ಜಿಗಳನ್ನು ಸಲ್ಲಿಸುವ ಬೋಧಕೇತರ ನೌಕರರುಗಳು ವರ್ಗಾವಣೆ ಅರ್ಜಿ ನಮೂನೆ-02 ರಲ್ಲಿ ಭರ್ತಿ ಮಾಡಿ ಸಂಬಂಧಿಸಿದ ನಿಯಂತ್ರಣಾಧಿಕಾರಿಗಳ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವುದು.
> ವರ್ಗಾವಣೆ ಬಯಸುವ ನೌಕರರಿಂದ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು, ಆದ್ಯತೆ ಬಯಸಿದ್ದಲ್ಲಿ ಆದ್ಯತೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು, ನೌಕರರ ಸೇವಾ ವಿವರಗಳನ್ನು ಹಾಗೂ ಆದ್ಯತೆಗೆ ಸಂಬಂಧಿಸಿದ ದಾಖಲೆಗಳನ್ನು ಉಲ್ಲೇಖಿತ ವರ್ಗಾವಣೆ ಮಾರ್ಗಸೂಚಿಗಳನ್ವಯ ಅರ್ಹರಿರುವ ಬಗ್ಗೆ ಪರಿಶೀಲಿಸಿ, ದೃಢೀಕರಿಸಿ ಈ ಆಯುಕ್ತಾಲಯದಲ್ಲಿ ವರ್ಗಾವಣೆ ಆಗಬೇಕಾಗಿರುವ ನೌಕರರ ಅರ್ಜಿಗಳನ್ನು ಕ್ರೋಢೀಕರಿಸಿ ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಗಳಲ್ಲಿ ಹುದ್ದೆವಾರು ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ:05-06-2025 ರೊಳಗಾಗಿ ಈ ಕಛೇರಿಗೆ ಸಲ್ಲಿಸಲು ಕೂಡಲೇ ಅಗತ್ಯ ಕ್ರಮವಹಿಸಲು ಸೂಚಿಸಿದೆ.