ಬೆಂಗಳೂರು :2025-26ನೇ ಸಾಲಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖ (1) ರ ಆದೇಶದಲ್ಲಿ 2024-25ನೇ ಸಾಲಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದೆಂದು ತಿಳಿಸಲಾಗಿದೆ. ಅದರಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳನ್ನು ನಿಯಂತ್ರಿಸುವ ಸಲುವಾಗಿ ಉಲ್ಲೇಖ (2) ರ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು, 2024 ನ್ನು ರೂಪಿಸಿ ಅಧಿಸೂಚಿಸಲಾಗಿರುತ್ತದೆ.
ಸದರಿ ವರ್ಗಾವಣೆ ನಿಯಮಗಳ ನಿಯಮ 9 ರನ್ವಯ 2025-26 ನೇ ಸಾಲಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಾರ್ವಜನಿಕ ಹಿತಾಸಕ್ತಿಯ ಹಾಗೂ ಕೋರಿಕೆ ವರ್ಗಾವಣೆ ಪ್ರಕ್ರಿಯೆಯನ್ನು ದಿನಾಂಕ:23.06.2025 ರಿಂದ ದಿನಾಂಕ: 28.07.2025 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಸದರಿ ವರ್ಗಾವಣೆ ನಿಯಮಗಳ ನಿಯಮ 4 ರನ್ವಯ ಮಂಜೂರಾದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಶೇಕಡಾ 9 ರಷ್ಟು ಕಡ್ಡಾಯ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆ ಹಾಗೂ ಶೇಕಡಾ 6 ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ನಡೆಸಲು ಅವಕಾಶವಿದ್ದು ಅದರಂತೆ ಕ್ರಮವಹಿಸಲು ಉದ್ದೇಶಿಸಲಾಗಿರುತ್ತದೆ.
ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆಗಳು:
ವರ್ಗಾವಣೆ ನಿಯಮಗಳ ನಿಯಮ 4ರಲ್ಲಿ ಹೇಳಿರುವ ವಿಶೇಷ ಪ್ರಕರಣಗಳಿಗೆ ಅನ್ವಯಿಸುವ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಇಲಾಖೆಯ http://rdprtransfer.karnataka.gov.in , ವೆಬ್ಸೈಟ್ ಸಲ್ಲಿಸುವುದು, ಕೊನೆಯ ದಿನಾಂಕದ ನಂತರ ಸಲ್ಲಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಗತ್ಯ ದಾಖಲಾತಿಗಳಿಲ್ಲದ ಮನವಿಗಳನ್ನು ತಿರಸ್ಕರಿಸಲಾಗುವುದು.