ಕಲಬುರಗಿ : ರಾಜ್ಯದಲ್ಲಿ ಈ ಬಾರಿ ಒಟ್ಟು 1,281 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಸಂಗ್ರಹವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಮೃತ್ ಯೋಜನೆಯಡಿಯಲ್ಲಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು, ಚಿತ್ತಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಉದ್ಘಾಟನೆ ಸೇರಿದಂತೆ ಒಟ್ಟು ₹86.79 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಇಂದು ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು,ರಾಜ್ಯಾದ್ಯಂತ 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಯುವಕ ಯುವತಿಯರ ಜ್ಞಾನಾರ್ಜನೆಗೆ ನೆರವಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು ₹1,281 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಸಂಗ್ರಹವಾಗಿದೆ. ನರೇಗಾ ಯೋಜನೆಯಡಿಯಲ್ಲಿ ತಾಯಂದಿರು ಕೆಲಸ ಮಾಡಲು ಹೋದಾಗ ಅವರ ಮಕ್ಕಳನ್ನು ಬಿಟ್ಟು ಹೋಗಲು ರಾಜ್ಯಾದ್ಯಂತ 3,867 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 50,000ಕ್ಕೂ ಹೆಚ್ಚು ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ ಎಂದರು.
ಚಿತ್ತಾಪುರ ಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗಾಗಿ ₹150 ಕೋಟಿ ವೆಚ್ಚದ ಕ್ರಿಯಾಯೋಜನೆ ಈಗಾಗಲೇ ಸಿದ್ದವಾಗಿದೆ. ಇದರ ಅಡಿಯಲ್ಲಿ 87 ಹಳ್ಳಿಗಳಿಗೆ ಅಗತ್ಯ ಅನುದಾನ ಲಭ್ಯವಾಗಲಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಮೂಲಭೂತ ಸೌಕರ್ಯ, ಕುಡಿಯುವ ನೀರು ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ₹25 ಕೋಟಿ ವೆಚ್ಚದಲ್ಲಿ ಗುಂಡಗುರ್ತಿ ಬಳಿ ಸೋಲಾರ್ ಎನರ್ಜಿ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ವಾಡಿ ಹಾಗೂ ಚಿತ್ತಾಪುರ ಪಟ್ಟಣದ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.