ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ಡಿಸೆಂಬರ್ 7 ಮತ್ತು 8 ರಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೂಪ್ ಸಿ ಹುದ್ದೆಗಳಾದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ 150 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ನೀಡದೆ ಕಟ್ಟುನಿಟ್ಟಿನ ಪರೀಕ್ಷೆ ಸೂಚನೆ ನೀಡಲಾಗಿದೆ.
ಪರೀಕ್ಷೆಯಲ್ಲಿ ಭಾಗವಹಿಸಲಿರುವ ಎಲ್ಲಾ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಕ್ಯುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಡಿ.7 ರಂದು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಕನ್ನಡ ಭಾಷಾ ಪರೀಕ್ಷೆ, ಡಿ.8 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಪತ್ರಿಕೆ-1 ಸಾಮಾನ್ಯ ಜ್ಞಾನ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಪತ್ರಿಕೆ-2, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯದ ಕುರಿತು ಪರೀಕ್ಷೆ ಇರುತ್ತದೆ. ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ 200ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತ್ತು ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾದ ಅಧಿಕಾರಿಗಳು, ಮೇಲ್ವಿಚಾರಕರು ಪರೀಕ್ಷಾ ಕೇಂದ್ರಗಳಲ್ಲಿ ಎರಡು ಗಂಟೆ ಮುಂಚಿತವಾಗಿ ಹಾಜರಿರಬೇಕು. ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್‍ಗಳನ್ನು ಸರಿಯಾದ ಸಮಯಕ್ಕೆ ಪರೀಕ್ಷಾರ್ಥಿಗಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾ ಸಮಯದಲ್ಲಿ ಮೇಲ್ವಿಚಾರಕರು ಮೊಬೈಲ್ ಬಳಸಬಾರದು ಮತ್ತು ಡ್ರೆಸ್‍ಕೋಡ್ ಅನುಸರಿಸಬೇಕೆಂದು ಸೂಚನೆ ನೀಡಲಾಗಿದೆ.