ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.. ಮಳೆಯ ಆರ್ಭಟದಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಲ್ಲಿ ಹಲವಡೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿವೆ. ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ಕಡೆ ಮನೆಗಳು ಕುಸಿದಿವೆ.ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಆದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯ ಹಿನ್ನೆಲೆಯಲ್ಲಿ ಹಲವಡೆ ಅಡಿಕೆ, ಬಾಳೆ, ತೆಂಗು, ಭತ್ತ, ಉದ್ದು, ಈರುಳ್ಳಿ, ಟೊಮೆಟೊ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಗದಗ ಸೇರಿ ಹಲವೆಡೆ ಭಾರಿ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರೀ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.