ಬೆಂಗಳೂರು : ತೀವ್ರ ಚಳಿಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನವೇ ರಣಬಿಸಿಲು ಜನರನ್ನು ಸುಡುತ್ತಿದೆ. ತಾಪಮಾನ 30 ಡಿಗ್ರಿ ಸೆ.ಮೀರಿದೆ.
ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಚಳಿಯಿಂದ ನಡುಗುತ್ತಿದ್ದ ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ. ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವರಾತ್ರಿಗೆ ಶಿವ ಶಿವ ಎಂದು ಚಳಿ ಹೋಗುವ ಮುನ್ನವೇ ರಾಜ್ಯದಲ್ಲಿ ಬಿರು ಬಿಸಿಲಿನ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಈ ಬಾರಿಯಬೇಸಿಗೆಯಲ್ಲಿ ನೇಸರ ಉಗ್ರ ಪ್ರತಾಪ ತೋರುವ ಲಕ್ಷಣಗ ಳಿವೆ. ಸದ್ಯ, ಉತ್ತರ ಕರ್ನಾಟಕ ಭಾಗದ ಲ್ಲಷ್ಟೇ ಅಲ್ಲ, ಕರಾವಳಿ, ಬೆಂಗಳೂರಿನಲ್ಲೂ ಬಿಸಿಲಿನ ಝಳ ಅಧಿಕವಾಗಲಿದ್ದು ಜನ ಬಸವಳಿಯಲಿದ್ದಾರೆ. ವಿಶೇಷವಾಗಿ ಏಪ್ರಿಲ್-ಮೇ ತಿಂಗಳಿ ನಲ್ಲಂತೂ ರಾಜ್ಯದಲ್ಲಿ ಬಿಸಿಲಿನ ಆರ್ಭಟ ಇನ್ನೂ ಅಧಿಕವಾಗಲಿದೆ.
ಪ್ರಸ್ತುತ ಬೆಂಗಳೂರಿನಲ್ಲಿ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಏಪ್ರಿಲ್-ಮೇ ತಿಂಗಳಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಟಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಸದ್ಯ 34 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಏಪ್ರಿಲ್-ಮೇ ಮಾಹೆಯಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗೆಮುಟ್ಟಲಿದೆ. ಅದರಲ್ಲೂ ಕಲಬುರಗಿಯಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ದಾಟಬಹುದು’ ಎಂದು ಹವಾ ಮಾನ ತಜ್ಞಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೀದರ್, ಕಲಬುರಗಿ, ಯಾದಗಿರಿ, ವಿಜಯ ಪುರ, ರಾಯಚೂರು, ಕೊಪ್ಪಳ, ಗದಗ, ಬಾಗ ಲಕೋಟೆ. ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಏಪ್ರಿಲ್ -ಮೇ ತಿಂಗಳಿನಲ್ಲಿ ಉಷ್ಣಾಂಶ ವಾಡಿಕೆಗಿಂತ ಬಹಳಷ್ಟು ಅಧಿಕವಾಗಲಿದೆ. ಬೆಂಗಳೂರಿನಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ವರೆಗೂ ಹೋಗಬಹುದು. ಕರಾವಳಿ ಜಿಲ್ಲೆಗಳಾದ ಮಂಗ ಳೂರು, ಉಡುಪಿ, ಕಾರವಾರಗಳಲ್ಲಿ 38 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ.
ಬೇಸಿಗೆಯಲ್ಲಿ ಇರಲಿ ಈ ಮುನ್ನೆಚ್ಚರಿಕೆ
ಬೇಸಿಗೆಯಲ್ಲಿ ದೀರ್ಘಕಾಲದವರೆಗೆ ಸೂರ್ಯನ ಬೆಳಕು ಮತ್ತು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ದೇಹದಲ್ಲಿನ ನೀರು ಕಳೆದುಹೋಗುತ್ತದೆ. ನಂತರ ದೇಹದ ಉಷ್ಣತೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಸಿಂಪೆಥೆಟಿಕ್ ನರಮಂಡಲವು ಸಕ್ರಿಯಗೊಳ್ಳುತ್ತದೆ ಮತ್ತು ದೇಹವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ನೀರಿನ ಕೊರತೆಯಿಂದ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ರಕ್ತದ ದಪ್ಪವಾಗುವುದರಿಂದ, ಹೃದಯ ಮತ್ತು ಅಪಧಮನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಆಗ ನಮ್ಮ ಚರ್ಮವು ಶಾಖವನ್ನು ವೇಗವಾಗಿ ಹೊರಸೂಸುತ್ತದೆ. ಈ ಪರಿಸ್ಥಿತಿಯಲ್ಲಿ ಹೆಚ್ಚು ಬೆವರುವುದಿಲ್ಲ, ಪರಿಣಾಮ ದೇಹವು ತಣ್ಣಗಾಗಲು ಸಾಧ್ಯವಾಗುವುದಿಲ್ಲ. ಇದು ಹೀಟ್ ಸ್ಟ್ರೋಕ್ ಮತ್ತು ಡಿಹೈಡ್ರೇಶನ್ಗೆ ಕಾರಣವಾಗುತ್ತದೆ.
ನಿರ್ಜಲೀಕರಣದಿಂದ ಪಾರಾಗುವುದು ಹೇಗೆ?
ಸುಡುವ ಶಾಖದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಇನ್ನೂ ಹೆಚ್ಚು ಎಚ್ಚರದಿಂದಿರಬೇಕು.
ನಮ್ಮ ದೇಹದ ಹೆಚ್ಚಿನ ಭಾಗವು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರಿನ ಕೊರತೆಯಿಂದ ಡಿಹೈಡ್ರೇಶನ್ ಉಂಟಾಗುತ್ತದೆ. ಇದನ್ನು ತಪ್ಪಿಸಲು ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಎಳನೀರು, ನಿಂಬೆ ಪಾನಕ ಮತ್ತು ಎಲ್ಲಾ ರೀತಿಯ ತಾಜಾ ಹಣ್ಣಿನ ರಸವನ್ನು ಕುಡಿಯಬಹುದು.
ಪ್ರಖರ ಬಿಸಿಲು ಮತ್ತು ವಿಪರೀತ ತಾಪಮಾನವಿದ್ದಾಗ ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಹೋಗಿ. ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ. ಹತ್ತಿಯ ಸಡಿಲವಾದ ಬಟ್ಟೆಗಳನ್ನು ಧರಿಸಿ. ಟೋಪಿ, ಕ್ಯಾಪ್ ಅಥವಾ ಛತ್ರಿಯನ್ನು ಸಹ ಬಳಸಬಹುದು. ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ.








