ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಈ ಎಲ್ಲ ಕರ್ತವ್ಯಗಳು ಕಡ್ಡಾಯವಾಗಿವೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 2ರ (28ಸಿ) ಖಂಡ 58, 145, 146 ಮತ್ತು 184 ರೊಡನೆ ಓದಿಕೊಂಡಂತೆ 311 ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜವಾಬ್ದಾರಿ ನಕ್ಷೆಯ, ವಿವರ, ವಿವರ, ಮೇಲ್ವಿಚಾರಣೆ) ನಿಯಮಗಳು, 2018ರ ಕರಡನ್ನು ಸದರಿ ಅಧಿನಿಯಮದ 311ನೇ ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು, ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆಂದೂ ಈ ಮೂಲಕ ಸೂಚನೆಯನ್ನು ನೀಡಲಾಗಿದೆ.
ಮೇಲೆ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಸದರಿ ಕರಡಿಗೆ ಸಂಬಂಧಿಸಿದಂತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು, ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಡಾ॥ ಅಂಬೇಡ್ಕರ್ ವೀದಿ, ಬೆಂಗಳೂರು-01 ಇವರಿಗೆ ಮೇಲ್ಕಂಡ ಅವಧಿಯೊಳಗೆ ಕಳುಹಿಸಲು ಕೋರಲಾಗಿದೆ.
ಕರಡು ನಿಯಮಗಳು
1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜವಾಬ್ದಾರಿ ನಕ್ಷೆಯ ವಿವರ, ಮೇಲ್ವಿಚಾರಣೆ) ನಿಯಮಗಳು, 2018 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಿತವಾದ .ದಿನಾಂಕದಿಂದ `ಜಾರಿಗೆ ಬರತಕ್ಕದ್ದು.
2. ಪರಿಭಾಷೆಗಳು.- ಈ ನಿಯಮಗಳಲ್ಲಿ ಸಂದರ್ಭವು ಅನ್ಯತಾ ಅಗತ್ಯಪಡಿಸಿದ ಹೊರತು.
(ಎ) “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,
1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)
(ಬಿ) “ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸಬೇಕಾದ ಪ್ರಕಾರ್ಯಗಳು” ಎಂದರೆ ಅಧಿನಿಯಮದಲ್ಲಿ ಪ್ರಕರಣ 58, 145, 146 ಮತ್ತು 184 ರಡಿಯಲ್ಲಿ ಅನುಕ್ರಮವಾಗಿ ಗ್ರಾಮ ಪಂಚಾಯತಿಗಳಿಗೆ, ತಾಲ್ಲೂಕು ಪಂಚಾಯತಿಗಳಿಗೆ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರಿಕರಣ ನೀತಿಯನ್ವಯ ನಿಗಧಿಪಡಿಸಲಾದ ಪ್ರಕಾರ್ಯಗಳು.
(ಸಿ) ಪ್ರಕರಣ ಎಂದರೆ, ಅಧಿನಿಯಮದ ಪ್ರಕರಣ:
– (ಡಿ) “ಅನುದಾನ” ಎಂದರೆ ಅನುಸೂಚಿ-I, ಅನುಸೂಚಿ-II, ಮತ್ತು ಅನುಸೂಚಿ-III ರಡಿ ನಿರ್ದಿಷ್ಟಪಡಿಸಿರುವ ಪ್ರಕಾರ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರವು ಆಯಾ ಇಲಾಖೆಗೆ ಆ ಇಲಾಖೆಯ ಲೆಕ್ಕಶೀರ್ಷಿಕೆಯಡಿ ನಿಗಧಿಗೊಳಿಸಿರುವ ಅನುದಾನ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಕ್ರೋಢೀಕರಿಸಿದ ಸಂಪನ್ಮೂಲದ ಅನುದಾನ.
3. ಗ್ರಾಮ ಪಂಚಾಯತಿಯ ಜವಾಬ್ದಾರಿ ನಕ್ಷೆಯ ವಿವರ- ರಾಜ್ಯದಲ್ಲಿಯ ಪ್ರತಿಯೊಂದು ಗ್ರಾಮ ಪಂಚಾಯತಿಯು ಅಧಿನಿಯಮದ ಅನುಸೂಚಿ-I ರಲ್ಲಿ ನಿರ್ದಿಷ್ಟಪಡಿಸಲಾದ ಜವಾಬ್ದಾರಿಗಳ ಜೊತೆ ಈ ನಿಯಮಗಳ ಅನುಬಂಧ-1 ರಲ್ಲಿ ನಮೂದಿಸಲಾದ ಕಡ್ಡಾಯ ಕರ್ತವ್ಯಗಳು ಮತ್ತು ಕಾರ್ಯಚಟುವಟಿಕೆಗಳ ಜವಾಬ್ದಾರಿ ನಕ್ಷೆ ವಿವರಗಳನ್ನೊಳಗೊಂಡಿರತಕ್ಕದ್ದು.
4. ತಾಲ್ಲೂಕು ಪಂಚಾಯತಿಯ ಜವಾಬ್ದಾರಿ ನಕ್ಷೆಯ ವಿವರ- ರಾಜ್ಯದಲ್ಲಿಯ ಪ್ರತಿಯೊಂದು ತಾಲ್ಲೂಕು ಪಂಚಾಯತಿಯು ಅಧಿನಿಯಮದ ಅನುಸೂಚಿ-II ರಲ್ಲಿ ನಿರ್ದಿಷ್ಟಪಡಿಸಲಾದ ಜವಾಬ್ದಾರಿಗಳ ಜೊತೆ ಈ ನಿಯಮಗಳ ಅನುಬಂಧ-IIರಲ್ಲಿ ನಮೂದಿಸಲಾದ ಕಡ್ಡಾಯ ಕರ್ತವ್ಯಗಳು ಮತ್ತು ಕಾರ್ಯಚಟುವಟಿಕೆಗಳ ನಕಾಶೆಯ ವಿವರಗಳನ್ನೊಳಗೊಂಡಿರತಕ್ಕದ್ದು.
5. ಜಿಲ್ಲಾ ಪಂಚಾಯತಿಯ ಜವಾಬ್ದಾರಿ ನಕ್ಷೆಯ ವಿವರ,- ರಾಜ್ಯದಲ್ಲಿಯ ಪ್ರತಿಯೊಂದು ಜಿಲ್ಲಾ ಪಂಚಾಯತಿಯು ಅಧಿನಿಯಮದ ಅನುಸೂಚಿ-III ರಲ್ಲಿ ನಿರ್ದಿಷ್ಟಪಡಿಸಲಾದ ಜವಾಬ್ದಾರಿಗಳ ಜೊತೆ ಈ ನಿಯಮಗಳ ಅನುಬಂಧ-IIIರಲ್ಲಿ : ನಮೂದಿಸಲಾದ ಕಡ್ಡಾಯ ಕರ್ತವ್ಯಗಳು ಮತ್ತು ಕಾರ್ಯಚಟುವಟಿಕೆಗಳ. ನಕಾಶೆಯ ವಿವರಗಳನ್ನೊಳಗೊಂಡಿರತಕ್ಕದ್ದು.
6. ಕಾರ್ಯವಿಧಾನ.- ಅಧಿನಿಯಮದ, ಅನುಸೂಚಿ-I, ಅನುಸೂಚಿ-II ಮತ್ತು ಅನುಸೂಚಿ-III ಹಾಗೂ ಇನ್ನಿತರೆ ಪ್ರಕರಣಗಳಡಿ ಗ್ರಾಮೀಣಾಭಿವೃದ್ಧಿಗಾಗಿ ವಹಿಸಿರುವ ಪ್ರಕಾರ್ಯಗಳಿಗೆ ಸಂಬಂಧಪಡುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒದಗಿಸಲಾಗುವ ಹಣಕಾಸು, ಅಥವಾ ಯಾವುದೇ ನೆರವಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು ಪಂಚಾಯತ್ ರಾಜ್ ಸಂಸ್ಥೆಗಳು ಜವಾಬ್ದಾರಿ ಹೊಂದಿರತಕ್ಕದ್ದು. ಈ ಕಾರ್ಯಕ್ರಮಗಳಿಗೆ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಆಯಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಹಕಾರ ನೀಡತಕ್ಕದ್ದು. ಈ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ವಲಯ, ತಾಲ್ಲೂಕು ವಲಯ ಹಾಗೂ ಗ್ರಾಮ ಪಂಚಾಯತಿ ವಲಯದಲ್ಲಿ ಪ್ರತ್ಯೇಕವಾಗಿ ಸರ್ಕಾರವು ಗುರುತಿಸಿ ಅನುದಾನಗಳನ್ನು ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಲಭ್ಯವಾಗುವಂತೆ ಮಾಡತಕ್ಕದ್ದು.
7. ತಾಂತ್ರಿಕ ಮೇಲ್ವಿಚಾರಣೆ – ಸರ್ಕಾರವು ನಿಗಧಿಪಡಿಸಿದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸತಕ್ಕದ್ದು. ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯವಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗದರ್ಶನ ನೀಡುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ ಆಗಿರತಕ್ಕದ್ದು. ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಮತ್ತು ವಿಭಾಗೀಯ ಮಟ್ಟದ ಇಲಾಖಾ ಅಧಿಕಾರಿಗಳು ಆಯಾ ಯೋಜನೆಗಳು ಅಥವಾ ಆದೇಶಗಳಲ್ಲಿ ಒಳಗೊಂಡಿರುವ ತಾಂತ್ರಿಕ ಮತ್ತು ಹಣಕಾಸಿನ ಲಭ್ಯತೆಗನುಸಾರ ಪರಿವೀಕ್ಷಣಾ ಅಧಿಕಾರಿಗಳಾಗಿ ಕಾಮಗಾರಿಗಳ ಅನುಷ್ಠಾನದ ಗುಣಮಟ್ಟದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪರಿವೀಕ್ಷಣೆಯ ಸಮಯದಲ್ಲಿ ಗಮನಿಸಿದ ನ್ಯೂನತೆಗಳ ಬಗ್ಗೆ ವರದಿಯನ್ನು ಸಂಬಂಧಪಟ್ಟ ಅನುಷ್ಠಾನಗೊಳಿಸುವ ಪಂಚಾಯತ್ ರಾಜ್ ಸಂಸ್ಥೆಗೆ ಒಂದು ವಾರದೊಳಗಾಗಿ ಕಳುಹಿಸತಕ್ಕದ್ದು. ಈ ವರದಿಯನ್ನು ಪಡೆದುಕೊಂಡ 15 ದಿನದೊಳಗೆ ಅಂಥಾ ಪಂಚಾಯತ್ ರಾಜ್ ಸಂಸ್ಥೆಯು ಅನುಸರಣಾ ಕ್ರಮವನ್ನು ಕೈಗೊಳ್ಳಬೇಕು. ಈ ರೀತಿ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಸಂಬಂಧಪಟ್ಟ ಪಂಚಾಯತ್ ರಾಜ್ ಸಂಸ್ಥೆಯು ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದೆ ಎಂದು ಪರಿಗಣಿಸತಕ್ಕದ್ದು ಮತ್ತು ಸರ್ಕಾರವು ಸೂಕ್ತ ಕ್ರಮವನ್ನು ಅಂಥ ಸಂಸ್ಥೆಯ ವಿರುದ್ಧ ತೆಗೆದುಕೊಳ್ಳತಕ್ಕದ್ದು.









