ಬಳ್ಳಾರಿ : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಸಂಡೂರು ಪಟ್ಟಣದ ಅಗ್ನಿಶಾಮಕದಳ ಮುಂಭಾಗದ ವಿಶ್ವಾಸ್ ಯು.ಲಾಡ್ ಮೈದಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಂಡೂರು ಭಾಗದಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 2004 ರಿಂದ 2024 ರವರೆಗೆ 1,216 ಕೋಟಿ ರೂ. ಅನುದಾನ ನೀಡಲಾಗಿದೆ. ರೂ.160.00 ಕೋಟಿ ವೆಚ್ಚದಲ್ಲಿ ನಿಡುಗುರ್ತಿ ಸೇರಿದಂತೆ 58 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
2013 ರ ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಮನೆಗಳನ್ನು ಕಟ್ಟಲು ಗುರಿ ಹೊಂದಲಾಗಿತ್ತು. ಸಂಡೂರು ಭಾಗದಲ್ಲಿಯೇ 12,000 ಮನೆಗಳನ್ನು ನೀಡಲಾಗಿತ್ತು. ಸಂಡೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು 1216.38 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವುದರ ಮೂಲಕ ಸರ್ವರ ಏಳಿಗೆಗಾಗಿ ಶ್ರಮಿಸುವ ಸರ್ಕಾರ ನಮ್ಮದು ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಪ.ಜಾತಿ ಮತ್ತು ಪ.ವರ್ಗದವರ ಅಭಿವೃದ್ಧಿಗಾಗಿ ಹಣ ಮೀಸಲಿಟ್ಟು, ಖರ್ಚು ಮಾಡುತ್ತಿದ್ದೇವೆ, ದೇಶದಲ್ಲಿಯೇ ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ಜಾರಿಗೊಳಿಸಿದ ರಾಜ್ಯ ನಮ್ಮದಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರ ಅಭಿವೃದ್ಧಿಗಾಗಿಯೇ 33,182 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ:
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಮ್ಮ ಸರ್ಕಾರ ರಚನೆಯಾದ 8 ತಿಂಗಳಲ್ಲಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಪಂಚ ಗ್ಯಾರಂಟಿಗಳಿAದ ರಾಜ್ಯವು ಅಭಿವೃದ್ಧಿ ಕಾಣುತ್ತಿದೆ. ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಸುಮಾರು 300 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಮಹಿಳೆಯರು ಪ್ರತಿ ತಿಂಗಳು 2000 ರೂ. ಹಣ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1.60 ಕೋಟಿ ಮನೆಗಳಿಗೆ 200 ಯೂನಿಟ್ ವಿದ್ಯುತ್ ನೀಡಲಾಗಿದೆ. ಎರಡು ವರ್ಷಗಳ ಕಾಲ ನಿರುದ್ಯೋಗ ಪದವೀಧರ ಮತ್ತು ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು ಕ್ರಮವಾಗಿ 3 ಸಾವಿರ ಹಾಗೂ 2 ಸಾವಿರ ಹಣ ನೀಡಲಾಗುತ್ತಿದೆ ಎಂದರು.
ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣದ ಪಾಲಿನಲ್ಲಿ ನಮಗೆ ಅನ್ಯಾಯವಾಗುತ್ತಿದ್ದು, ಇದಕ್ಕಾಗಿಯೇ ನಮ್ಮ ತೆರಿಗೆ ನಮ್ಮ ಹಕ್ಕು ಎಂಬುದಾಗಿ ಹೋರಾಟ ಮಾಡುತ್ತಿದ್ದೇವೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಹಣ ಕಟ್ಟುವುದರಲ್ಲಿ ನಮ್ಮ ರಾಜ್ಯ ಎರಡನೆ ರಾಜ್ಯವಾಗಿದೆ, ಆದರೆ ನಮಗೆ ಸಿಗಬೇಕಾದ ಪಾಲು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ 2013-18 ರಲ್ಲಿ ನಮ್ಮ ಸರ್ಕಾರದಿಂದ 15 ಲಕ್ಷ ಮನೆಗಳನ್ನು ಕಟ್ಟಿದ್ದೆವು, ಸಂಡೂರಿನಲ್ಲಿಯೇ ಸುಮಾರು 12 ಸಾವಿರ ಮನೆಗಳನ್ನು ಕಟ್ಟಿದ್ದೇವೆ, ಇದಕ್ಕೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹಾಗೂ ಆಗ ಸಂಡೂರಿನ ಶಾಸಕರಾಗಿದ್ದ, ಈಗಿನ ಸಂಸದ ಈ. ತುಕಾರಾಂ ಅವರೇ ಕಾರಣ, ಇದರ ಕೀರ್ತಿ ಇವರಿಗೆ ಸಲ್ಲಬೇಕು, ಆದರೆ ಕಳೆದ ಬಾರಿ ಇದ್ದ ಸರ್ಕಾರ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.