ಬೆಂಗಳೂರು : 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2024 -25 ನೇ ಸಾಲಿನಲ್ಲಿಯೂ ಬೋರ್ಡ್ ಪರೀಕ್ಷೆ ನಡೆಸದಿರಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿಶಾಲೆಗಳಿಗೆ2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾಯೋಜನೆ ಹಾಗೂ ಶೈಕ್ಷಣಿಕ ಮಾರ್ಗದರ್ಶಿಯನ್ನು ಉಲ್ಲೇಖಗಳನ್ವಯ ಹೊರಡಿಸಲಾಗಿದೆ. ಇದನ್ನು ಆಧರಿಸಿ ಶಾಲೆಗಳಲ್ಲಿ ಪಠ್ಯವಸ್ತು ಬೋಧನೆ ಹಾಗೂ ಮೌಲ್ಯಾಂಕನ ಕುರಿತು ವಹಿಸಬೇಕಾದ ಕ್ರಮಗಳನ್ನು ಈ ಕೆಳಕಂಡಂತೆ ಸೂಚಿಸಿ, ಅದರಂತೆ ಕ್ರಮವಹಿಸಲು ತಿಳಿಸಿದೆ.
ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು 2024- 25 ನೇ ಶೈಕ್ಷಣಿಕ ಸಾಲಿನಿಂದ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಭಾಗ -1 ಮತ್ತು ಭಾಗ -2ರ ಆಧಾರದಲ್ಲಿ ಮೌಲ್ಯಂಕನ ಪೂರ್ಣಗೊಳಿಸಲು ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಲು ನಿರ್ಧರಿಸಿದೆ.
ಬೋರ್ಡ್ ಪರೀಕ್ಷೆ ಕುರಿತಾಗಿ ವಿಚಾರಣೆ ಮುಂದುವರೆಸಿದ್ದ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅನುಮತಿ ಇಲ್ಲವೆಂದು ಹೇಳಿದ್ದು, ಹೀಗಾಗಿ ಮೌಲ್ಯಂಕನವನ್ನೇ ಮುಂದುವರಿಸಲು ಶಾಲೆಗಳಿಗೆ ಸುತ್ತೋಲೆ ಕಳುಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
2024-2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಮಾಹಿತಿಯನ್ನು ನೀಡಲಾಗಿರುತ್ತದೆ. ಅದರಂತೆ, ಶಾಲಾ ಹಂತದಲ್ಲಿ ನಿಗದಿತ ಕಾಲಾವಧಿಯೊಳಗೆ* ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮವಹಿಸುವುದು.