ಬೆಂಗಳೂರು : ರಾಜ್ಯದಲ್ಲಿ ಬಾಣಂತಿಯರ ಸಾವು ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಆಸ್ಪತ್ರೆಗಳಲ್ಲಿ ಈ ಮಹತ್ವದ ನಿಯಮಗಳನ್ನು ಪಾಲಿಸುವಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.
ತಾಯಿ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಹಜ ಮತ್ತು ಸಿಜೇರಿಯನ್ ಶಸ್ತ್ರ ಚಿಕಿತ್ಸೆಗಳು ಜರಗುತ್ತಿವೆ. ತಾಯಿ ಆರೋಗ್ಯ ಕಾರ್ಯಕ್ರಮದ ಮಾರ್ಗಸೂಚಿಯಂತೆ ಸಹಜ ಹೆರಿಗೆಯಾದ ಬಾಣಂತಿಯನ್ನು ಕನಿಷ್ಠ 3 ದಿವಸಗಳು ಹಾಗೂ ಸಿಜೇರಿಯನ್ ಶಸ್ತ್ರ, ಚಿಕಿತ್ಸೆ ಬಳಿಕ 7 ದಿವಸಗಳ ವರೆಗೂ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಒಳರೋಗಿಯಾಗಿ ಚಿಕಿತ್ಸೆಯನ್ನು ನೀಡುವುದು. ಒಂದು ವೇಳೆ, ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದ್ದಲ್ಲಿ ಹಾಗೂ ಬಾಣಂತಿ ಮತ್ತು ನವಜಾತ ಶಿಶುವಿನ ಆರೋಗ್ಯವು ತೃಪ್ತಿಕರವಾಗಿದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಮನ್ವಯದೊಂದಿಗೆ ಹತ್ತಿರದ ತಾಲ್ಲೂಕು ಅಥವಾ CemONC ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಸ್ತ್ರ ಚಿಕಿತ್ಸೆಗೊಂಡ 5 ದಿವಸಗಳ ಬಳಿಕ ಮಾರ್ಗಸೂಚಿಯಂತೆ ನಗು-ಮಗು ವಾಹನದಲ್ಲಿ ವರ್ಗಾಯಿಸಿ ಒಳರೋಗಿಯಾಗಿ ದಾಖಲಿಸಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುವುದು. ಬಾಣಂತಿಗೆ ತಗುಲುವ ಖರ್ಚು ವೆಚ್ಚಗಳನ್ನು ಜೆ.ಎಸ್.ಎಸ್.ಕೆ ಕಾರ್ಯಕ್ರಮದಲ್ಲಿ ಭರಿಸುವುದು.
ಈ ಮೇಲಿನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ. ಈ ಸುತ್ತೋಲೆಯನ್ನು ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ರವರಿಂದ ಅನುಮೋದಿಸಲ್ಪಟ್ಟಿರುತ್ತದೆ.