ಬೆಂಗಳೂರು: ನಾನೊಬ್ಬನೇ ಅಲ್ಲ, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದ 48 ಮಂದಿ ಹನಿಟ್ರ್ಯಾಪ್ ಸಿಡಿ, ಪೆನ್ ಡ್ರೈವ್ ಗಳು ಇದ್ದಾವೆ. ಇವುಗಳಲ್ಲಿ ನ್ಯಾಯಾಧೀಶರದ್ದೂ ಇದೆ. ಹೀಗಾಗಿ ತನಿಖೆಗೆ ಕೊಡಿ ಎಂಬುದಾಗಿ ಸದನದಲ್ಲಿ ಸಚಿವ ಕೆ.ಎನ್ ರಾಜಣ್ಣ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುವುದು ಕೆಟ್ಟ ಸಂಸ್ಕೃತಿಯಾಗಿದೆ. ಕೆಲ ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಸಿಎಂ ಆಗಬೇಕೆಂಬ ಕಾರಣಕ್ಕೂ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರು.
ಈ ವೇಳೆ ನಾನು ಹನಿಟ್ರ್ಯಾಪ್ ವಿಚಾರದಲ್ಲಿ ಲಿಖಿತ ದೂರು ಕೊಡುತ್ತೇನೆ. ಅದನ್ನು ತನಿಖೆ ಮಾಡಿ ಎಂಬುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇದಲ್ಲದೇ ನಾನೊಬ್ಬನೇ ಅಲ್ಲ, ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದ 48 ಮಂದಿಯ ಹನಿಟ್ರ್ಯಾಪ್ ಸಿಡಿ, ಪೆನ್ ಡ್ರೈವ್ ಗಳಿದ್ದಾವೆ. ಇದರಲ್ಲಿ ಜಡ್ಜ್ ಗಳದ್ದೂ ಇದೆ. ತನಿಖೆಗೆ ನೀಡುವಂತೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ದೂರು ಕೊಡಲಿ. ಆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ವಹಿಸುತ್ತೇನೆ. ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕು. ಸತ್ಯಾಸತ್ಯತೆ ಹೊರಬರಲಿ ಎಂದರು.