ಬೆಂಗಳೂರು : ಬಿಬಿಎಂಪಿ ಶಾಲೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ಒದಗಿಸಲು ಸೆಕ್ಯೂರಿಟಿ, ಡಿಟೆಕ್ಟಿವ್, ಇನ್ವೆಸ್ಟಿಗೇಟಿವ್ ಏಜೆನ್ಸಿಗಳಿಗೆ ನೀಡಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ/ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸುವ ಸಂಬಂಧ ವಲಯ ಮಟ್ಟದಲ್ಲಿ ಟೆಂಡರ್ ಗಳನ್ನು ಕರೆದು ಯಶಸ್ವಿ ಬಿಡ್ ದಾರರಿಗೆ ಪಾಲಿಕೆಯ ಶಿಶುವಿಹಾರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸುವ ಸಂಬಂಧ ಕಾರ್ಯಾದೇಶಗಳನ್ನು ಸಹ ನೀಡಲಾಗಿರುತ್ತದೆ.
ಮುಂದುವರೆದು, 2024-25 ಸಾಲಿನ ಶೈಕ್ಷಣಿಕ ವರ್ಷವು ದಿನಾಂಕ:29-05-2024ರಂದು ಆರಂಭವಾಗುತ್ತಿದ್ದು, ಹಾಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ/ ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮಗೊಳಿಸಲು ಶಾಲಾ/ಕಾಲೇಜುಗಳಿಗೆ ಅವಶ್ಯಕವಾಗಿರುವ ಶಿಕ್ಷಕರು/ಉಪನ್ಯಾಸಕರನ್ನು ಎಸ್.ಡಿ.ಎಂ.ಸಿ / ಸಿ.ಡಿ.ಸಿ ಮೂಲಕ ನಿಯೋಜಿಸಿಕೊಳ್ಳಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಹಾಲಿ ವಲಯ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ಹೊರಡಿಸಲಾಗಿರುವ ಎಲ್ಲಾ ಟೆಂಡರ್ ಗಳ ಕಾರ್ಯಾದೇಶಗಳನ್ನು ಈ ಕೂಡಲೇ ತತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದು ಪಡಿಸುವಂತೆ ಈ ಮೂಲಕ ಸೂಚಿಸಿದೆ.