ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಅಭ್ಯರ್ಥಿಗಳ ನೈಜತೆ ಪರಿಶೀಲಿಸಲು ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮತ್ತು ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಪರಿಚಯಿಸಿದೆ.
ಇಂದು ಬೆಳಗ್ಗೆ ಪತ್ರಿಕೆ-1 ಮತ್ತು ಮಧ್ಯಾಹ್ನ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ. ರಾಜ್ಯದ 903 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಒಟ್ಟು 3.35 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ತಡೆಯಲು ಎಲ್ಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವ ಮೆಟಲ್ ಡಿಟೆಕ್ಟರ್ ತಪಾಸಣೆ, ಡಿಜಿಟಲ್ ಬೆರಳಚ್ಚು ದಾಖಲಿಸುವಿಕೆ ಮತ್ತು ಮುಖ ಗುರುತಿಸುವಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದು ಸೂಚಿಸಲಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯು ಉದ್ಯೋಗ ಪಡೆಯುದಕ್ಕಾಗಿ ಅರ್ಹತಾ ಪರೀಕ್ಷೆಯಾಗಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಹಾಗೂ ಮೊಬೈಲ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ಸಾಧನ ಸಲಕರಣೆಗಳನ್ನು ಪರೀಕ್ಷಾ ಕೊಠಡಿಗೆ ತರದಂತೆ ಮತ್ತು ಬಳಸದಂತೆ ಮುಂಜಾಗೃತೆ ವಹಿಸಬೇಕೆಂದು ತಿಳಿಸಲಾಗಿದೆ.
ಪರೀಕ್ಷೆಗಾಗಿ ಸೂಕ್ತ ಭದ್ರಯೆ ಇರುವಂತೆ ಹಾಗೂ ನಿಗಧಿತ ಅವಧಿಗೆ ಪರೀಕ್ಷೆಗಳನ್ನು ಆರಂಭಿಸಿ, ನಿಗಧಿತ ಸಮಯಕ್ಕೆ ಮುಕ್ತಾಯಗೊಳಿಸಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಗೊಂದಲ, ಒತ್ತಡಗಳಾಗದಂತೆ ಪರೀಕ್ಷಾ ಪೂರ್ವದಲ್ಲಿಯೆ ಪರೀಕ್ಷಾ ನಿಯಮಗಳನ್ನು ತಿಳಿಸಬೇಕು. ಪರೀಕ್ಷೆಗಳು ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ಜರುಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ.
ಟಿಇಟಿ ಪರೀಕ್ಷೆಗೆ ಹಾಜರಾಗುವಂತ ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ಪ್ರವೇಶ ಪತ್ರದಲ್ಲಿ ತಮ್ಮ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ, ಸಹಿ ಮತ್ತು ಭಾವಚಿತ್ರ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನ್ ಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಷಿತ್ರ ಮತ್ತು ಆಧಾರ್ ಕಾರ್ಡ್, ಇಲ್ಲವೇ ಇತರೆ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ತೋರಿಸಬೇಕು.








