ಬೆಂಗಳೂರು : ರಾಜ್ಯ ಸರ್ಕಾರವು ಮುಜರಾಯಿ ಆಸ್ತಿ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಲವೆಡೆ ಖಾಸಗಿಯವರು, ವಿವಿಧ ಟ್ರಸ್ಟ್ ಹಾಗೂ ಸಂಘಸಂಸ್ಥೆಗಳು ಅತಿಕ್ರಮಿಸಿಕೊಂಡಿದ್ದ ಮುಜರಾಯಿ ಇಲಾಖೆ ಅಧೀನಕ್ಕೆ ಸೇರಿದ್ದ ಸುಮಾರು 10,700 ಎಕರೆ ಭೂಮಿಯನ್ನು ತೆರವುಗೊಳಿಸಿ ಸಂರಕ್ಷಿಸಲಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ‘ಎ’ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರ್ಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.
ನಮ್ಮ ಸರಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ.