ಬೆಂಗಳೂರು : ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಅಗತ್ಯ ಬಿದ್ದರೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನಾಗರೀಕರ ರಕ್ಷಣಾ ಕಾರ್ಯಚಟುವಟಿಕೆಗಳ ಕುರಿತು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು, ಎಲ್ಲಾ ಮಹಾನಗರಗಳ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಈ ಕೆಳಕಂಡ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು.
ರಾಜ್ಯದ ಕಾನೂನು ಸುವ್ಯವಸ್ಥೆಗಿಂತ ಯಾವುದೂ ದೊಡ್ಡದಲ್ಲ. ರಾಜ್ಯದ ಜನರ ರಕ್ಷಣೆಗೆ ಮೊದಲ ಆಧ್ಯತೆ ನೀಡಬೇಕು.
ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವರದಿ ನೀಡಬೇಕು.
ಪ್ರಮುಖ ಸ್ಥಳಗಳಲ್ಲಿ Mock Drill ಮಾಡಬೇಕು.
ಅಕ್ರಮ ದಾಸ್ತಾನು ಮತ್ತು ಕಾಳಸಂತೆಯ ಮೇಲೆ ನಿರಂತರ ನಿಗಾವಹಿಸಿ, ಅನಗತ್ಯವಾಗಿ ಸಾಮಾಗ್ರಿಗಳ ಬೆಲೆ ಹೆಚ್ಚು ಮಾಡುವ ಪ್ರಯತ್ನಗಳನ್ನು ತಡೆಯಬೇಕು.
ಕಾನೂನು ಸುವ್ಯವಸ್ಥೆಯೊಂದಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರಬೇಕು. ಈ ಕುರಿತು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು.
ರಾಷ್ಟ್ರೀಯ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು.
ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಬೇಕು. ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಫ್ಯಾಕ್ಟ್ ಚೆಕ್ ನಿರಂತರವಾಗಿ ಮಾಡಬೇಕು. ಸುಳ್ಳು ಸುದ್ದಿ ಬಗ್ಗೆ ಮೂಲದಲ್ಲೇ ಅಧಿಕೃತ ಸ್ಪಷ್ಟಿಕರಣ ನೀಡಬೇಕು.
ಗುಪ್ತಚರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಸಾರ್ವಜನಿಕ ಸೇವೆ ಒದಗಿಸುವ ತಾಣಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಬೇಕು.
ಅಗ್ನಿಶಾಮಕ ದಳದ ಕೇಂದ್ರಗಳು ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು, ಸಹಾಯವಾಣಿ ಆರಂಭಿಸಬೇಕು.
ಪೌರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ, ಅವರಿಗೆ ಸೂಕ್ತ ತರಬೇತಿಯನ್ನು ಒದಗಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಪೌರ ರಕ್ಷಣಾ ವ್ಯವಸ್ಥೆಗೆ ಸ್ವಯಂಸೇವಕರನ್ನು ನೇಮಕ ಮಾಡುವ ಕಾರ್ಯ ಆರಂಭಿಸಬೇಕು. ಆನ್‌ಲೈನ್ ನಲ್ಲಿ ಹೆಸರು ನೋಂದಾಯಿಸಲು ವ್ಯವಸ್ಥೆ ಕಲ್ಪಿಸಬೇಕು.
ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಿರಂತರ ಗಸ್ತು ವ್ಯವಸ್ಥೆ ಮಾಡಬೇಕು.
ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ದೇಶದ, ರಾಜ್ಯದ ಸಹಬಾಳ್ವೆಗೆ ಧಕ್ಕೆ ತರುವ, ಕೋಮುಭಾವನೆ ಕೆರಳಿಸಿ ಕೋಮು ವಿಭಜನೆ ಮಾಡಲು, ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುತ್ತಿರುವ ಎಲ್ಲರ ಪಟ್ಟಿ ಸಿದ್ಧಪಡಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.
ಕೋಮು ಗೂಂಡಾಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು ಹಾಗೂ ಅಂಥವರ ಮೇಲೆ ನಿಗಾ ಇಡಬೇಕು.
ಎಲ್ಲಾ ಕಮಿಷನರೇಟ್‌ಗಳಲ್ಲಿ ಸದಾಕಾಲ ಅಲರ್ಟ್ ಇರಬೇಕು. ಪ್ರಮುಖ ಸ್ಥಾವರಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.
ಸುರಕ್ಷತೆ ಕುರಿತಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಸಹ ಕಟ್ಟುನಿಟ್ಟಿನಿಂದ ಪಾಲಿಸಬೇಕು.