ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು, ಪದವೀಧರರಿಗೆ ಪ್ರತಿ ತಿಂಗಳಿಗೆ ರೂ.3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1500 ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತದೆ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳು ಪೂರೈಸಿ ಹೆಸರನ್ನು ನೋಂದಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಯುವನಿಧಿ ಯೋಜನೆಯ ಸೌಲಭ್ಯವನ್ನು ಪಡೆಯಲು ಅನುಕೂಲವಾಗುವಂತೆ ವಿಶೇಷ ನೋಂದಣಿ ಅಭಿಯಾನವನ್ನು ಫೆಬ್ರವರಿ, 15 ರವರೆಗೆ ವಿಸ್ತರಿಸಲಾಗಿದೆ. ವಿಶೇಷ ನೋಂದಣಿ ಅಭಿಯಾನವು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ನಡೆಯಲಿದೆ.
ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು. ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು. ಸಿಓಇ ಕಟ್ಟಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ತುಮಕೂರು ರಸ್ತೆ, ಪೀಣ್ಯ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗ ವಿನಿಮಯ ಕಛೇರಿಗಳು ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವನಿಧಿ ಸಹಾಯವಾಣಿ ಹಾಗೂ ನೋಂದಣಿ ಕೇಂದ್ರಗಳನ್ನು ತರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಅಥವಾ ವೆಬ್ ಸೈಟ್ www.sevasindhugs.karnataka.gov.in ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಕರ್ನಾಟದಲ್ಲಿ ವಾಸವಿರುವವರು (ಕರ್ನಾಟಕದಲ್ಲಿ ಕನಿಷ್ಠ 06 ವರ್ಷಗಳ ವರೆಗೆ ಪದವಿ / ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಅಧ್ಯಯನ ಮಾಡಿದವರು). ಸ್ವಯಂ ಉದ್ಯೋಗ ಕೈಗೊಳ್ಳದಿರುವ ಅಭ್ಯರ್ಥಿಗಳು ಮತ್ತು ಉನ್ನತ ವ್ಯಾಸಂಗ ಮುಂದುವರಿಸದೇ ಇರುವ ಅಭ್ಯರ್ಥಿಗಳಾಗಿರಬೇಕು.
ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ತಿಂಗಳ 01 ರಿಂದ 25ನೇ ತಾರೀಖಿನೊಳಗೆ ನಿರುದ್ಯೋಗಿ ಎಂದು ಸ್ವಯಂ ಘೋಷಣೆಯನ್ನು ಆನ್ ಲೈನ್ ನಲ್ಲಿ ದಾಖಲು ಮಾಡುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.sevasindhugs.karnataka.gov.in ಅಥವಾ ಸಹಾಯವಾಣಿ ಸಂಖ್ಯೆ: 1800-599-7154 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು, ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.