ಬೆಂಗಳೂರು : ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪ್ರವಾಹ ಸಂತ್ರಸ್ತರ `ಪರಿಹಾರ ಮೊತ್ತ’ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ನೀಡುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ಕಂಇ 258 ಟಿಎನ್‌ಆರ್ 2024, ದಿನಾಂಕ: 01.08.2024 ರಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಈ ಕೆಳಕಂಡಂತೆ ಪಾವತಿಸಲು ನಿರ್ದೇಶನಗಳನ್ನು ನೀಡಲಾಗಿದೆ.
- ಸರ್ಕಾರದ ದಿನಾಂಕ: 01.08.2024 ರ ಆದೇಶದ ಕ್ರ.ಸಂ: 04 ರಲ್ಲಿ ತಿಳಿಸಿರುವಂತೆ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ಥಿಗೆ ಕನಿಷ್ಟ ರೂ.6,500/- ಗಳಿಂದ ಗರಿಷ್ಟ ರೂ.50,000/-ಗಳನ್ನು ಈ ಕೆಳಕಂಡಂತೆ ಪಾರದರ್ಶಕತೆ ಮಾನದಂಡಗಳನ್ವಯ ಅರ್ಹತೆಯನುಸಾರ ಪಾವತಿಸುವುದು.
- ಅತಿವೃಷ್ಟಿ/ಪ್ರವಾಹದಿಂದ ಮನೆಯ ಗೋಡೆಗಳೊಂದಿಗೆ ಮೇಲ್ಮಾವಣಿ ಕುಸಿತ (Walls and roof collapse) (ಶೇ.75% ಕ್ಕಿಂತ ಹೆಚ್ಚು) ಹಾನಿಯಾದ ಮನೆಗಳನ್ನು ಸಂಪೂರ್ಣ ಹಾನಿಯಾದ ಮನೆಯೆಂದು ಪರಿಗಣಿಸಿ, ಸರ್ಕಾರದ ಇದೇ ಸಮಸಂಖ್ಯೆಯ ಆದೇಶ ದಿನಾಂಕ: 01-08-2024ರ ಕ್ರಮ ಸಂಖ್ಯೆ: 02 ರಲ್ಲಿನ ನಿರ್ದೇಶನದಂತೆ ಕ್ರಮವಹಿಸತಕ್ಕದ್ದು.
- ಮನೆಹಾನಿಯ ಪ್ರಮಾಣವನ್ನು ಈ ಮೇಲಿನಂತೆ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸುವುದು. ಇದೆ ದಿನಾಂಕ: 01.08.2024 ರ ಆದೇಶದಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ನಿಯಮಾನುಸಾರ ಅರ್ಹ ಸಂತ್ರಸ್ಥರಿಗೆ ಪರಿಹಾರ ಪಾವತಿಸಲು ಕ್ರವಹಿಸುವುದು.
- ಭಾಗಶಃ ಮನೆ ಹಾನಿಗಾಗಿ ರೂ.50,000/- ಗಳ ವರೆಗೆ ಪಾವತಿಸಲಾಗುವ ಮನೆ ಹಾನಿ ಪರಿಹಾರ ಪಡೆಯುವ ಸಂತ್ರಸ್ಥರ ವಿವರಗಳಾದ, ಹಾನಿಯಾದ ಮನೆಯ ಜಿ.ಪಿ.ಎಸ್. ಛಾಯಾಚಿತ್ರ, ಆರ್.ಆರ್. ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸತಕ್ಕದ್ದು.
- ಪೂರ್ಣ ಹಾನಿಯಾದ ಮನೆಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಹಂಚಿಕೆ ಪತ್ರವನ್ನು ಜಿಲ್ಲಾಧೀಕಾರಿಗಳ ಹಂತದಲ್ಲಿಯೇ RGRHCL ತಂತ್ರಾಂಶದ ಮೂಲಕ ವಿತರಿಸತಕ್ಕದ್ದು.