ಬೆಂಗಳೂರು: ರಾಜ್ಯ ಸರ್ಕಾರದಿಂದ ಕಲಬುರ್ಗಿಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ(ರಿ)ಯಲ್ಲಿ ನಡೆದಿದೆ ಎನ್ನಲಾದಂತ ಅಕ್ರಮಗಳ ಕುರಿತಂತೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ.
ಇಂದು ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ನಡವಳಿಯನ್ನು ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ), ಕಲಬುರಗಿ ಇವುಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರಿನ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು, ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆ ನಡೆಸಿ ಆರೋಪಿತರ ಮಾಹಿತಿಯೊಂದಿಗೆ ಪರಿಪೂರ್ಣ ತನಿಖಾ ವರದಿಯನ್ನು ಸ್ಪಷ್ಟ ಅಭಿಪ್ರಾಯ/ಶಿಫಾರಸ್ಸಿನೊಂದಿಗೆ 15 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಿದೆ. ಅಲ್ಲದೆ, ತನಿಖಾಧಿಕಾರಿಗಳು ಈ ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕಾಗಿ ಅಗತ್ಯವಿರುವವರನ್ನು ತೆಗೆದುಕೊಳ್ಳತಕ್ಕದ್ದು ಮತ್ತು ತನಿಖೆಯ ವ್ಯಾಪ್ತಿಯಲ್ಲಿ ಮಂಡಳಿ ಮತ್ತು ಸಂಘಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ಕೆಳಕಂಡ ಅಂಶಗಳನ್ನು ಪರಾಮರ್ಶಿಸಲು ಸೂಚಿಸಿ ಆದೇಶಿಸಲಾಗಿದೆ ಎಂದಿದ್ದಾರೆ.
ಅ) ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ
1. ಸರ್ಕಾರವು ರೂ.45.00 ಕೋಟಿಗಳಲ್ಲಿ 315 ಹೊಸ ಬಸ್ ಗಳನ್ನು ಖರೀದಿಸಲು ಅನುಮೋದನೆ ನೀಡಿದ್ದರೂ ಈ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿರುವುದು.
2. ಸರ್ಕಾರವು 47 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ 37 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಡಳಿಯು ಮಂಜೂರಾತಿ ನೀಡಿರುವುದು.
3. ಸರ್ಕಾರವು 815 ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದರೂ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸದಿರುವುದು.
4. ಮಂಡಳಿಯ ಕಳಪೆ ಕಾಮಗಾರಿಗಳ ಬಗ್ಗೆ ಸಿಎಜಿ ವರದಿಯ ಷರಾಗಳ ಬಗ್ಗೆ.
5. ಮಾನ್ಯ ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ:02.12.2022 ಹಾಗೂ 08.07.2022ರಂದು ನಡೆದ ಸಭೆಗಳಲ್ಲಿ ಎರಡು ವರ್ಷಗಳಿಂದ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ರದ್ದುಪಡಿಸುವಂತೆ ನಿರ್ಣಯಿಸಿದ್ದರೂ ಸಹ ಮಂಡಳಿಯು ಕ್ರಮವಹಿಸಿಲ್ಲದಿರುವುದು.
6. ಗುತ್ತಿಗೆ ದಾರರಿಗೆ ವಿಧಿಸುವ ದಂಡ ಹಾಗೂ ವಸತಿ ಗೃಹಗಳಿಂದ ಸ್ವೀಕೃತವಾಗುವ ಬಾಡಿಗೆಯು ಸರ್ಕಾರದ ಆದಾಯವಾಗಿದ್ದರೂ ಮಂಡಳಿಯು ಇವುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲು ನಿರ್ಣಯಿಸಿರುವುದು.
7. ಮಂಡಳಿಯು ಆರಂಭಿಕ ಶಿಲ್ಕು, ಬಿಡುಗಡೆಯಾದ ಅನುದಾನಗಳ ಪೈಕಿ ಶೇ.60ರಷ್ಟು ಹಣವನ್ನು ವೆಚ್ಚ ಮಾಡದಿರುವ ಕರ್ತವ್ಯಲೋಪದ ಬಗ್ಗೆ ಮತ್ತು ವೆಚ್ಚಮಾಡಲಾದ ಶೇ.40ರ ಅನುದಾನದಲ್ಲಿ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ.
8. ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಗಾಗಿ ಅನುಮೋದನೆಯಾಗಿದ್ದ ರೂ.3.50 ಕೋಟಿಗಳನ್ನು ಕೆ.ಟಿ.ಪಿ.ಪಿ ಕಾಯ್ದೆಯನ್ವಯ ವೆಚ್ಚಮಾಡದಿರುವುದು ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ರೂ.50.00 ಲಕ್ಷಗಳನ್ನು ಹೆಚ್ಚುವರಿಯಾಗಿ ವೆಚ್ಚಮಾಡಿರುವುದು.
ಆ) ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ
1. ಅಧಿಕಾರ ವ್ಯಾಪ್ತಿ ಮೀರಿ ರೂ.310.59 ಕೋಟಿಗಳ ವೆಚ್ಚದಲ್ಲಿ 06 ಜಿಲ್ಲೆಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಟ್ಟಿರುವುದಾಗಿ ಸುಳ್ಳು ಲೆಕ್ಕ ತೋರಿಸಿ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ.
2. ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೂ ಸುಮಾರು ರೂ.327.40 ಕೋಟಿಗಳನ್ನು ಮಂಜೂರು ಮಾಡಿ ಖಾಸಗಿ ಅನುದಾನಿತ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಮ್ ಗಳನ್ನು ನಿರ್ಮಾಣ ಮಾಡಿರುವ ಬಗ್ಗೆ.
3. ವ್ಯಾಪ್ತಿಗೆ ಒಳಪಡದಿದ್ದರೂ ಕಿರು ಉತ್ಪಾದನೆಗಳ ಉದ್ಯಮಗಳನ್ನು ಪ್ರಾರಂಭಿಸಲು ರೂ.576.48 ಲಕ್ಷಗಳನ್ನು ವೆಚ್ಚಮಾಡಿರುವ ಬಗ್ಗೆ.
4. ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಹೊಲಿಗೆ ಮತ್ತು ಕಸೂತಿ ತರಬೇತಿ ಸಂಬಂಧ ಅಧಿಕಾರ ವ್ಯಾಪ್ತಿ ಮೀರಿ ರೂ.273.59 ಕೋಟಿಗಳನ್ನು ವೆಚ್ಚ ಮಾಡಿರುವ ಬಗ್ಗೆ. 5. ಅಧಿಕಾರ ವ್ಯಾಪ್ತಿ ಮೀರಿ ರೂ.327.40 ಕೋಟಿಗಳನ್ನು ದೇಶಿ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ಧನ ನೀಡಿರುವಲ್ಲಿ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ನಿಯಮ ಬಾಹಿರವಾಗಿ ಪಕ್ರಿಯೆ ಜರುಗಿಸಿರುವ ಬಗ್ಗೆ.
6. ಕೋವಿಡ್ 19ರಿಂದ ಮರಣ ಹೊಂದಿದ್ದ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಸರ್ಕಾರದ ಅನುಮೋದನೆ ಇಲ್ಲದ ರೂ.50,000/- ಪರಿಹಾರ ನೀಡಿರುವ ಬಗ್ಗೆ.
7. ಲೋಕೋಪಯೋಗಿ ಇಲಾಖೆಯ ಬಾಡಿಗೆ ಕಟ್ಟಡಗಳಿಗೆ ನಿಯಮಬಾಹಿರವಾಗಿ ವೆಚ್ಚ ಮಾಡಿರುವ ಬಗ್ಗೆ.
8. ಸೇಡಂ ತಾಲ್ಲೂಕನಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂ. ವೆಚ್ಚಮಾಡಿರುವ ಬಗ್ಗೆ. 9. ವಿವಿಧ ಇಲಾಖೆಗಳಲ್ಲಿ ಜಾರಿಯಲ್ಲಿಲ್ಲದಿರುವ ಯೋಜನೆ/ಕಾರ್ಯಕ್ರಮಗಳನ್ನು ನಿಯಮಕ್ಕೆ ವಿರುದ್ಧವಾಗಿ ವಿವಿಧ ಅನುಷ್ಠಾನಗೊಳಿಸಬೇಕೆಂಬ ಮಾತ್ರ ಇಲಾಖೆಗಳಲ್ಲಿ ಇರುವ ಕಾರ್ಯಕ್ರಮಗಳನ್ನೇ ಜಾರಿಗೆ ತಂದು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ.
ಮೇಲೆ ಓದಲಾದ (2)ರ ಆದೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ, ಸಂಘ (ರಿ), ಕಲಬುರಗಿ ಇಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಕೈಗೊಳ್ಳಲು ನೇಮಿಸಲಾಗಿರುವ ತನಿಖಾಧಿಕಾರಿಗಳಾದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಅವರ ಕೋರಿಕೆಯಂತೆ, ಸಹಾಯ ಮಾಡಲು ಈ ಕೆಳಕಂಡ ಅಧಿಕಾರಿಗಳ ಸೇವೆಯನ್ನು ಒದಗಿಸಿ ಆದೇಶಿಸಲಾಗಿದೆ.
1. ಕೆ.ಎನ್.ರಮೇಶ್, ಭಾಆಸೇ.
2. ಉಷಾ ಪಿ, ಅಪರ ನಿರ್ದೇಶಕರು (ಆಡಳಿತ), ವಿತ್ತೀಯ ಕಾರ್ಯನೀತಿ ಸಂಸ್ಥೆ (ರಾಜ್ಯ ಲೆಕ್ಕ ಪರಿಶೋಧನೆ ಮತ್ತು ರಾಜ್ಯ ಲೆಕ್ಕಪತ್ರ ಇಲಾಖೆಯ ಸೇವೆಗೆ ಸೇರಿದ ಅವರ ನಿರ್ದೇಶಕ ಶ್ರೇಣಿಯ ಅಧಿಕಾರಿ).
3. ಕೆ.ಪಿ.ಶಿವಕುಮಾರ್, ಮುಖ್ಯ ಅಭಿಯಂತರರು, ಯೋಜನಾ ನಿರ್ದೇಶಕರು, ಯೋಜನಾ ಅನುಷ್ಠಾನ ಘಟಕ, KSHIP, ಪಿ.ಡಬ್ಲ್ಯೂಡಿ ಅನೆಕ್ಸ್ ಕಟ್ಟಡ, ಕೆ.ಆರ್.ಸರ್ಕಲ್, ಬೆಂಗಳೂರು.
ಮೇಲೆ ಓದಲಾದ (3)ರಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಡಾ. ಇ.ವಿ. ರಮಣರೆಡ್ಡಿ, ಹಿಂದಿನ ಅಪರ ಮುಖ್ಯ ಕಾರ್ಯದರ್ಶಿ ರವರು ವರದಿ ನೀಡಿರುವುದನ್ನು ಗಮನಿಸಲಾಗಿದೆ. ಸದರಿ ವರದಿಯ ಮೇಲೆ ಇದುವರೆವಿಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರು ನೀಡಿರುವ ಟಿಪ್ಪಣಿಯಲ್ಲಿ ಈ ವಿಷಯದಲ್ಲಿ ವಿಚಾರಣೆ / ತನಿಖೆ ಅಗತ್ಯವಿದೆಯೆಂದು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಎಂಬ ಪ್ರತ್ಯೇಕ ಸಂಸ್ಥೆಯನ್ನು ಸೃಜಿಸಿ ಕಲ್ಯಾಣ ಕರ್ನಾಟಕ ಪದೇಶಾಭಿವೃದ್ಧಿ ಮಂಡಳಿಯ ಅನುದಾನಗಳನ್ನು ಸದರಿ ಸಂಘದ ಮೂಲಕ ಬಳಸಿರುವುದು ಅತ್ಯಂತ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೇಲಾಗಿ ಸದರಿ ಸಂಘದ ಚಟುವಟಿಕೆಗಳ ಬಗ್ಗೆ ಸೂಕ್ತ ಮೇಲುಸ್ತುವಾರಿಯನ್ನು ಕೂಡ ನಡೆಸಿರುವುದಿಲ್ಲ.
ಆದ್ದರಿಂದ ಡಾ. ಇ.ವಿ. ರಮಣ ರೆಡ್ಡಿ, ಹಿಂದಿನ ಅವರ ಮುಖ್ಯ ಕಾರ್ಯದರ್ಶಿ ಇವರ ವರದಿಯನ್ನು ಪರಿಶೀಲಿಸಿ ಹೆಚ್ಚಿನ ವಿಚಾರಣೆ / ತನಿಖೆ ಮಾಡಲು ನಿವೃತ್ತ ಭಾ.ಆ.ಸೇ. ಅಧಿಕಾರಿ ಶ್ರೀ ಸುಧೀರ್ ಕುಮಾರ್ ಇವರನ್ನು ನೇಮಿಸಿದೆ. ಈ ಕೆಳಕಂಡ ನಿಬಂಧನೆಗೊಳಪಟ್ಟು ಕೈಗೊಳ್ಳಬಹುದಾಗಿದೆ.
ಇವರ ವರದಿಯನ್ನು ಪರಿಶೀಲಿಸಿ ಹೆಚ್ಚಿನ ವಿಚಾರಣೆ / ತನಿಖೆ ಮಾಡಲು ನಿವೃತ್ತ ಭಾ.ಆ.ಸೇ. ಅಧಿಕಾರಿ ಶ್ರೀ ಸುಧೀರ್ ಕುಮಾರ್ ಇವರನ್ನು ನೇಮಿಸಿ ಆದೇಶಿಸಲಾಗಿದೆ. ಮುಂದುವರೆದು, ಸದರಿಯವರು ಆರು ತಿಂಗಳೊಳಗಾಗಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಹಾಗೂ ಸದರಿಯವರಿಗೆ ತನಿಖೆಗೆ ಅವಶ್ಯವಿರುವ ಮಾನವ ಸಂಪನ್ಮೂಲ, ಕಚೇರಿ, ವಾಹನ ಇತ್ಯಾದಿ ವ್ಯವಸ್ಥೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮತ್ತು ಜಿಲ್ಲಾಧಿಕಾರಿಗಳು, ಕಲಬುರಗಿ ಇವರಿಂದ ಒದಗಿಸಲು ಸೂಚಿಸಿ ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ಆದೇಶಿಸಿದೆ.
ಷರತ್ತುಗಳು:-
1. ತನಿಖಾಧಿಕಾರಿಯವರಿಗೆ ಪ್ರತಿ ಮಾಹೆ 1.50 ಲಕ್ಷ ರೂ.ಗಳ ಸಂಭಾವನೆ, ಸುಸ್ಥಿತಿಯಲ್ಲಿರುವ ಒಂದು ವಾಹನ ಹಾಗೂ ಸರ್ಕಾರದ ಕಾರ್ಯದರ್ಶಿಯವರಿಗೆ ಸಮಾನವಾಗಿ ಪುಯಾಣಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ನೀಡುವುದು.
2. ತನಿಖೆಗೆ ಅವಶ್ಯವಿರುವ ಮಾಹಿತಿ / ದಾಖಲೆಗಳನ್ನು ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಇವರು ಯಾವುದೇ ವಿಳಂಬವಿಲ್ಲದೇ ಒದಗಿಸತಕ್ಕದ್ದು. 3. ತನಿಖೆಗೆ ಅವಶ್ಯವಿರುವ ತಾಂತ್ರಿಕ ಸಿಬ್ಬಂದಿಯನ್ನು ಯಾವುದೇ ವಿಳಂಬವಿಲ್ಲದೇ ತನಿಖಾಧಿಕಾರಿಯವರ ಕೋರಿಕೆಯನುಸಾರ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಇವರು ಒದಗಿಸತಕ್ಕದ್ದು.
4. ತನಿಖೆಗೆ / ವರದಿ ತಯಾರಿಸಲು ಅವಶ್ಯವಿರುವ ಇತರ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ, ಕಲಬುರಗಿ ಇವರು ಒದಗಿಸುವುದು.
5. ಸ್ಥಳಾವಕಾಶ, ಲೇಖನ ಸಾಮಾಗ್ರಿ, ತನಿಖೆಗೆ ವಾಹನ ಇತ್ಯಾದಿಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯವರು ಒದಗಿಸುವುದು.
6. ತನಿಖಾಧಿಕಾರಿಯವರು ಪ್ರಕರಣದ ತನಿಖೆಯನ್ನು ಆದಷ್ಟು ತ್ವರಿತವಾಗಿ ಕೈಗೊಂಡು 06 (ಆರು) ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವುದು.
ಈ ಆದೇಶವು ಸರ್ಕಾರವು ಆಯಾ ಸಂದರ್ಭದಲ್ಲಿ ಹೊರಡಿಸುವ ಆದೇಶ ಮತ್ತು ಸುತ್ತೋಲೆಗೆ ಒಳಪಟ್ಟಿರುತ್ತದೆ ಎಂದಿದ್ದಾರೆ.
ಸಾಗರದಲ್ಲಿ ‘ನೋ ಪಾರ್ಕಿಂಗ್’ ಸ್ಥಳದಲ್ಲಿ ವಾಹನ ನಿಲ್ಲಿಸಿದವರಿಗೆ ಬಿಗ್ ಶಾಕ್: ಪೊಲೀಸರಿಂದ ‘ನೋಟಿಸ್’