ಬೆಂಗಳೂರು : ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಚಿಸಲಾದ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳಿಗೆ ಗೌರವಧನ ಮತ್ತು ಭತ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಆದೇಶದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ “ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಬಿಬಿಎಂಪಿ ಮಟ್ಟದಲ್ಲಿ ಬಿ.ಬಿ.ಎಂ.ಪಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಿ, ಸದರಿ ಪ್ರಾಧಿಕಾರ ಮತ್ತು ಸಮಿತಿಗಳ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಣೆ ಬಗ್ಗೆ ನಿರ್ದೇಶನಗಳನ್ನು ನೀಡಿ ಆದೇಶಿಸಿದ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಟಿಪ್ಪಣಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ (ಆಸು) 18 ಸ್ವೀಮರ 2024, ದಿನಾಂಕ: 25.01.2024ಕ್ಕೆ ಈ ಕೆಳಕಂಡ ಅಂಶಗಳ ಆಧಾರದ ಮೇಲೆ ಸೂಕ್ತ ತಿದ್ದುಪಡಿಗಳನ್ನು ಮಾಡಲು ಆದೇಶಿಸಿರುತ್ತಾರೆ.
1. ತಾಲ್ಲೂಕು ಸಮಿತಿಗಳ ಸದಸ್ಯರ ನಾಮನಿರ್ದೇಶನ ಈಗಾಗಲೇ ಯಾವುದಾದರೂ ತಾಲ್ಲೂಕಿನಲ್ಲಿ ಆಗದಿದ್ದಲ್ಲಿ ಅಂತಹ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಚರ್ಚಿಸಿ ತಾಲ್ಲೂಕು ಸಮಿತಿಗಳ ಸದಸ್ಯರ ನಾಮನಿರ್ದೇಶನವನ್ನು ಪೂರ್ಣಗೊಳಿಸುವುದು. ನಾಮನಿರ್ದೇಶನ ಮಾಡುವಾಗ ಮಹಿಳೆಯರಿಗೆ ಮತ್ತು ಯುವಕರಿಗೆ ಅಗತ್ಯ ಪ್ರಾತಿನಿಧ್ಯವನ್ನು ಕೊಡಬೇಕು.
2. ತಾಲ್ಲೂಕು ಸಮಿತಿಯ ಅಧ್ಯಕ್ಷರುಗಳಿಗೆ ತಿಂಗಳಿಗೆ ರೂ.25,000/- ಗಳ ಗೌರವಧನ ಕೊಡಬೇಕು ಹಾಗೂ ತಾಲ್ಲೂಕು ಸಮಿತಿಯ ಸದಸ್ಯರುಗಳಿಗೆ ಸೂಕ್ತ ಸಭಾ ಭತ್ಯೆ (Sitting Fees) ಯನ್ನು ನಿಗಧಿಪಡಿಸುವುದು.
3. ಗ್ಯಾರಂಟಿ ಪ್ರಾಧಿಕಾರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿಗಳ ಒಟ್ಟಾರೆ ವಿಷಯಗಳನ್ನು ವ್ಯವಹರಿಸಲು ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯದರ್ಶಿಯವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿರುತ್ತದೆ. ಆದರೆ ಗ್ಯಾರಂಟಿಗಳು ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವುದರಿಂದ ಸಮನ್ವಯ ಸಾಧಿಸುವ ಹಿತದೃಷ್ಟಿಯಿಂದ ನೋಡಲ್ ಅಧಿಕಾರಿಯನ್ನು ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ರವರನ್ನು ನೇಮಿಸುವುದು.
4. ಗ್ಯಾರಂಟಿ ಪ್ರಾಧಿಕಾರ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳಿಗೆ ಸೂಕ್ತವಾದ ಕಛೇರಿ ಹಾಗೂ ಪೀಠೋಪಕರಣಗಳನ್ನು ಸಹ ಒದಗಿಸಲು ಕ್ರಮ ಕೈಗೊಳ್ಳುವುದು.
5. ಗ್ಯಾರಂಟಿ ಕಾರ್ಯಕ್ರಮಕ್ಕಾಗಿ ಒಂದು ಪ್ರತ್ಯೇಕ ಲೆಕ್ಕಶೀರ್ಷಿಕೆಯನ್ನು ಸೃಜಿಸಲು ಆರ್ಥಿಕ ಇಲಾಖೆಗೆ ಸೂಚಿಸುವುದು.
6. ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಪೋರೇಷನ್ ಮಟ್ಟದಲ್ಲಿ ಆಯಾ ಮಹಾನಗರ ಪಾಲಿಕೆಗಳ ಆಯುಕ್ತರು ಗ್ಯಾರಂಟಿಗಳ ನೋಡಲ್ ಅಧಿಕಾರಿಗಳಾಗಿರತಕ್ಕದ್ದು.
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ. ಈ ಕೆಳಗಿನಂತೆ ಆದೇಶಿಸಿದೆ.