ಬೆಂಗಳೂರು: ರಾಜ್ಯ ಸರ್ಕಾರದಿಂದ ಇ-ಖಾತಾ ವಿತರಣೆ ಸಂಬಂಧ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. 3 ತಿಂಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ 3 ತಿಂಗಳ ಗಡುವು ನೀಡಲಾಗಿದೆ. ಇದಕ್ಕಾಗಿ SOP ಜಾರಿಗೊಳಿಸಿದೆ. ಈ ಮೂಲಕ ರಾಜ್ಯದ ಆಸ್ತಿ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಪ್ರಮಾಣಿಕ ಕಾರ್ಯವಿಧಾನವನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ 03 ತಿಂಗಳೊಳಗಾಗಿ ನೀಡಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ, ಇ-ಖಾತಾ ನೀಡಲು ಅಭಿಯಾನ ಕೈಗೊಂಡು ಕೆಳಕಂಡ ಕಾರ್ಯವಿಧಾನವನ್ನು ಅನುಸರಿಸುವುದು ಅಂತ ಹೇಳಿದ್ದಾರೆ.
1) ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿಯಿರುವ ಆಸ್ತಿಗಳ ಗುರುತಿಸುವುದು. ಇ- ಖಾತಾ ಪಡೆಯಲು ಗುರುತಿಸಲಾದ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡುವುದು.
2) ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿಯನ್ನು ಸ್ಥಾಪಿಸುವುದು. ಸಹಾಯವಾಣಿಯಲ್ಲಿ ಇ-ಖಾತಾ ಸಂಬಂಧಿಸಿದ ವಿಷಯದ ಕುರಿತು ಪರಿಪೂರ್ಣ ಮಾಹಿತಿ ಇರುವ ಸಿಬ್ಬಂದಿಯನ್ನು ಸಹಾಯವಾಣಿಗೆ ನೇಮಕ ಮಾಡುವುದು. ಸಹಾಯವಾಣಿಯ ಸಂಖ್ಯೆ ಮತ್ತು WhatsApp ಸಂಖ್ಯೆಯನ್ನು ವ್ಯಾಪಕವಾಗಿ ಪುಚುರಪಡಿಸುವುದು.
3) ಇ-ಖಾತಾ ಅಭಿಯಾನದ ಕುರಿತು ಪ್ರಚಾರ ಮಾಡಲು ನಗರ ಸ್ಥಳೀಯ ಸಂಸ್ಥೆಗಳ ವಾಹನದಲ್ಲಿ ಮುದ್ರಿತ ಧ್ವನಿ (ಆಡಿಯೋ), ಪುಚುರಪಡಿಸುವುದು. ಈ ಕುರಿತು ಪ್ರಕಟಣೆಗಳನ್ನು ಹೊರಡಿಸುವುದು. 4) ಇ-ಖಾತಾ ಅಭಿಯಾನದ ಬಗ್ಗೆ ಲಭ್ಯವಿರುವ ಮೊಬೈಲ್ ಸಂಖ್ಯೆಗಳಿಗೆ SMS ಮೂಲಕ ಮಾಹಿತಿಯನ್ನು ನೀಡುವುದು (General message).
5) ಇ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುಚುರಪಡಿಸುವುದು. ಪಡೆಯಬೇಕಾದ ಕನಿಷ್ಟ ದಾಖಲೆಗಳ ವಿವರ ಈ ಕೆಳಕಂಡಂತಿದೆ:
೩) “ಎ” ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆಗಳು.
1) ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 cc ಅಡಿ ನೀಡಲಾದ ಹಕ್ಕು ಪತ್ರ.
2) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.
3) ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. 4) ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ. 5) ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. 6) ಮಾಲೀಕರ ಗುರುತಿನ ದಾಖಲೆ ಪ್ರತಿ.
b) “ಬಿ” ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ
ದಾಖಲೆಗಳು:
ಆಸ್ತಿಗೆ ಸಂಬಂಧಿಸಿದಂತೆ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ:10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು.
ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
•ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ,
·ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿ
6) ದಿನಾಂಕ:01-08-2023 ರಲ್ಲಿ ನಿರ್ದೇಶನಾಲಯದಿಂದ ಹೊರಡಿಸಲಾದ ಸುತ್ತೋಲೆಯಂತೆ ಇ-ಖಾತಾ ಪಡೆಯಲು ಅರ್ಜಿ ಸ್ವೀಕೃತವಾದ ಒಂದು ದಿನದಲ್ಲಿ ಸಹಾಯವಾಣಿಯಲ್ಲಿ ದಾಖಲೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ Upload ಮಾಡುವುದು.
7) ಸಕಾಲ ಅಧಿನಿಯಮದಡಿ ಇ-ಖಾತಾವನ್ನು ನೀಡಲು ನಿಗಧಿಪಡಿಸಲಾದ 7 ದಿನಗಳೊಳಗಾಗಿ ತಂತ್ರಾಂಶದಲ್ಲಿ ನಿಗಧಿಪಡಿಸಲಾಗಿರುವ ಕಾರ್ಯ ಹರಿವಿನಲ್ಲಿ (Work flow) ನಿರ್ವಹಿಸಿ ಇ-ಖಾತಾ ಸೃಜಿಸಿ ನೀಡುವುದು.
8) ಇ-ಖಾತಾ ನಮೂನೆ 2/3 ಹಾಗೂ 2ಎ/3ಎ ನೀಡಲು ನಗರ ಸ್ಥಳೀಯ ಸಂಸ್ಥೆಗಳಿಂದ ನಿಗಧಿಪಡಿಸಲಾದ ಶುಲ್ಕವನ್ನು ಮಾತ್ರ ಪಡೆಯುವುದು.
9) ಮಹಾನಗರ ಪಾಲಿಕೆ /ನಗರ ಸ್ಥಳೀಯ ಸಂಸ್ಥೆಗಳು ನಾಗರೀಕರ ಅನುಕೂಲಕ್ಕಾಗಿ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2/3 ನ್ನು ಸೃಜಿಸಿ ನಾಗರೀಕರಿಗೆ ಒದಗಿಸಲು ಮೇಳಗಳನ್ನು ಆಯೋಜಿಸುವುದು, ವ್ಯವಸ್ಥಿತವಾಗಿ ಮತ್ತು ಸಂಘಟಿತ ರೀತಿಯಲ್ಲಿ ಮೇಳಗಳನ್ನು ನಡೆಸಲು ಕೆಳಕಂಡ ಕಾರ್ಯವಿಧಾನ ಕೈಗೊಳ್ಳುವುದು;
(i) ವಾರ್ಡ್ ಅಥವಾ ಬೀದಿಗಳನ್ನು, ಅಪಾರ್ಟ್‌ಮೆಂಟ್ / ಲೇಔಟ್ ಅನ್ನು ಗುರುತಿಸುವುದು. ಆ ಭಾಗದಲ್ಲಿನ ಸಕ್ರಿಯ ನಾಗರಿಕ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಕ್ರಿಯ ವ್ಯಕ್ತಿಗಳ ಸಹಾಯವನ್ನು ಪಡೆಯುವುದು.
(ii) ಸದರಿ ವಾರ್ಡ್ ಅಥವಾ ಬೀದಿಗಳನ್ನು, ಅಪಾರ್ಟ್‌ಮೆಂಟ್ / ಲೇಔಟ್ ನಲ್ಲಿ ಇ-ಖಾತಾ ಇಲ್ಲದಿರುವ ಸ್ವತ್ತುಗಳ ಪಟ್ಟಿಯನ್ನು ಪ್ರಚುರಪಡಿಸುವುದು.
(ii)ಇ-ಖಾತಾ ಪಡೆಯಲು ನಾಗರೀಕನು ಸಲ್ಲಿಸಬೇಕಾದ ಮಾಹಿತಿ/ದಾಖಲೆಗಳ ವಿವರವನ್ನು ತಿಳಿಸುವುದು.
(iv)ಅಧಿಕೃತ ಸ್ವತ್ತಿನ ಮಾಲೀಕರು ಸಲ್ಲಿಸಬೇಕಾದ ದಾಖಲೆಗಳು, ಮತ್ತು ಅನಧಿಕೃತ ಸ್ವತ್ತಾಗಿದ್ದಲ್ಲಿ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯ ವಿವರವನ್ನು ನೀಡುವುದು.
(v) ಮೇಳದ ದಿನಾಂಕದಂದು, ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು ಮತ್ತು ಇಂಟರ್ನೆಟ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳುವುದು. ಜನಸಂದಣಿ ಮತ್ತು ಅನಗತ್ಯ ಕಾಯುವಿಕೆಯನ್ನು ತಪ್ಪಿಸಲು ಅಗತ್ಯವಿರುವಷ್ಟು ಕಂಪ್ಯೂಟರ್ ಮತ್ತು ಪ್ರಿಂಟರ್ ಖಚಿತಪಡಿಸಿಕೊಳ್ಳಬೇಕು. ಮುಖ್ಯ ಇಂಟರ್ನೆಟ್ ವಿಫಲವಾದಲ್ಲಿ ಬ್ಯಾಕ್-ಅಪ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು.
(vi)ಮೂಲಭೂತ ಸೌಕರ್ಯಗಳೊಂದಿಗೆ ಸಾಕಷ್ಟು ಕುಳಿತುಕೊಳ್ಳುವ ಮತ್ತು ಕಾಯುವ ಸ್ಥಳವನ್ನು ಆಯೋಜಿಸುವುದು. ಆಗಮಿಸುವ ನಾಗರೀಕರಿಗೆ ಟೋಕನ್‌ಗಳನ್ನು ನೀಡುವುದು.
ಈ ಮೆಲ್ಕಂಡ ಕ್ರಮಗಳನ್ನು ಅನುಸರಿಸಿ, ದಿನಾಂಕ:10-05-2025 ರೊಳಗಾಗಿ ಇ-ಖಾತಾ ಅಭಿಯಾವನ್ನು ನಡೆಸಿ ತಮ್ಮ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ನೀಡಿ ಇ-ಖಾತಾ ಅಭಿಯಾವನ್ನು ಯಶಸ್ವಿಗೊಳಿಸುವಂತೆ ತಿಳಿಸಲಾಗಿದೆ.