ಬೆಂಗಳೂರು : ವಿಧಾನಸಭೆಯಲ್ಲಿ ಮಹತ್ವದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2025 ಮಂಡಿಸಲಾಗಿದ್ದು, ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಅನದಿಕೃತ ನಿವೇಶನ, ಕಟ್ಟಡಗಳಿಗೆ ತಾತ್ಕಾಲಿಕ ಖಾತಾ ಸೌಲಭ್ಯ ಕಲ್ಪಿಸಿ ಗ್ರಾಮ ಪಂಚಾಯಿತಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಗಳವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಸರ್ಕಾರಿ, ಅರಣ್ಯ ಭೂಮಿ, ಸರ್ಕಾರಿ ಒಡೆತನದ ಅಥವಾ ನಿಯಂತ್ರಣ, ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಹೊರತುಪಡಿಸಿದ ಆಸ್ತಿಗಳಿಗೆ ತಾತ್ಕಾಲಿಕ ಖಾತಾ ನೀಡಲಾಗುವುದು.
ಗ್ರಾಮ ಪಂಚಾಯಿತಿ ಮಾದರಿ ಕಟ್ಟಡ ಉಪನಿಧಿಗಳ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ ಅಥವಾ ಪರಿವರ್ತನೆಯಾಗದ ಭೂಮಿ ಇಲ್ಲವೇ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿ ಮೇಲಿನ ಅನುಮೋದಿತವಲ್ಲದ ಬಡಾವಣೆ ಅಥವಾ ನಿವೇಶನ ಕಟ್ಟಡ ಸೇರಿ ಪ್ರತಿಯೊಂದು ಕಟ್ಟಡ, ಖಾಲಿ ನಿವೇಶನಗಳಿಗೆ ಬಿ ನಮೂನೆಯ ಇ- ಖಾತಾ ಅನ್ವಯವಾಗಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2025
(2025ರ ವಿಧಾನಸಭೆಯ ವಿಧೇಯಕ ಸಂಖ್ಯೆ-18)
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ. ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ,-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್
ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. 199ಬಿ ಮತ್ತು 199ಸಿ ಹೊಸ ಪ್ರಕರಣಗಳ ಸೇರ್ಪಡೆ.- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14)ರ 199ಎ ಪ್ರಕರಣದ ತರುವಾಐ ಈ ಮುಂದಿನದನ್ನು ಸೇರಿಸತಕ್ಕದ್ದು ಎಂದರೆ:-
“199ಬಿ. ಸ್ವತ್ತುಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡುವುದು.- (1) ಈ
ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕಟ್ಟಡ ನಿರ್ಮಾಣದ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಿಗಳು, ಅಧಿಕಾರವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು.
(2) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳ ಮೇರೆಗೆ ಅಧಿಸೂಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಬರುವ ಸಂದರ್ಭದಲ್ಲಿ, ಅನುಮೋದಿತ ಲೇಔಟ್ ಪ್ಲಾನನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 17ನೇ ಪ್ರಕರಣದಡಿ ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದಿಂದ ಪಡೆಯತಕ್ಕದ್ದು ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 (1963ರ ಕರ್ನಾಟಕ 2
ಅಧಿನಿಯಮ 11)ರ 17ನೇ ಪ್ರಕರಣ ಮತ್ತು 17ನೇ ಪ್ರಕರಣದ 2(ಇ) ಉಪ-ಪ್ರಕರಣದ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ.
(3) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಉಪಬಂಧಗಳ ಮೇರೆಗೆ ರಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಒಳಗೊಳ್ಳದಿರುವ ಸಂದರ್ಭದಲ್ಲಿ, ಅನುಮೋದಿತ ಲೇಔಟ್ ಪ್ಲಾನನ್ನು ಪಟ್ಟಣ ಮತ್ತು ನಗರ ಯೋಜನೆ ನಿರ್ದೇಶಕ ಅಥವಾ ನಿರ್ದೇಶಕನು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 4 ಕೆ ಪ್ರಕರಣದ (2) ಉಪ-ಪ್ರಕರಣದಡಿ ಅಧಿಕೃತಗೊಳಿಸಿದ ಸಹಾಯಕ ನಿರ್ದೇಶಕ, ಪಟ್ಟಣ ಮತ್ತು ನಗರ ಯೋಜನೆ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯಿಂದ ಪಡೆದುಕೊಳ್ಳತಕ್ಕದ್ದು, ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ:
ಪರಂತು ಗ್ರಾಮ ಪಂಚಾಯಿತಿಯ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಯು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಸದರಿ ಉಪಬಂಧಗಳನ್ನು ಪಾಲಿಸಲು ವಿಫಲನಾದರೆ ಮತ್ತು ಕಾನೂನುಬದ್ದವಾಗಿಲ್ಲದೆ ರಚಿತವಾದ ನಿವೇಶನಕ್ಕೆ ಹೊಸ ಪಿಐಡಿ ಅಥವಾ ಖಾತಾವನ್ನು ನೀಡಿದರೆ, ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಅಥವಾ ಪ್ರಾಧಿಕಾರಿಯು ನಿಯಮಿಸಬಹುದಾದಂಥ ದಂಡನೆ ಅಥವಾ ಶಿಕ್ಷೆಗೆ ಹೊಣೆಗಾರನಾಗಿರತಕ್ಕದ್ದು.
199ಸಿ. ಕಟ್ಟಡ ಮತ್ತು ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳು. (1) ಗ್ರಾಮ ಪಂಚಾಯಿತಿಯು ಮಾದರಿ ಕಟ್ಟಡ ಉಪವಿಧಿಗಳ ಉಪಬಂಧಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಅಥವಾ ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯ ಮೇಲಿನ ಅನುಮೋದಿತವಲ್ಲದ ಲೇಔಟ್ ಅಥವಾ ಅದಿಭೋಗ ಅಥವಾ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯದೆ ಸ್ವಾಧೀನ ಪಡಿಸಿಕೊಂಡ ಕಟ್ಟಡವನ್ನು ಒಳಗೊಂಡು ಪ್ರತಿಯೊಂದು ಕಟ್ಟಡ, ಖಾಲಿ ಭೂಮಿ ಅಥವಾ ಅವೆರಡರಿಂದಲೂ, ಈ ಉಪಬಂಧವನ್ನು ಸೇರಿಸಲಾದ ದಿನಾಂಕಕ್ಕೆ ಮೊದಲು ಸೃಜಿಸಲಾದ ಸ್ವತ್ತುಗಳಿಗೆ ಮಾತ್ರ, ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ನಿಕಾಯ, ಯಾವುದೇ ಶಾಸನಬದ್ಧ ನಿಕಾಯ ಅಥವಾ ಸಂಸ್ಥೆಗೆ ಸೇರಿದ ಭೂಮಿಯನ್ನು ಹೊರತುಪಡಿಸಿ ಸ್ವತ್ತು ತೆರಿಗೆಯನ್ನು ವಿಧಿಸಬಹುದು ಮತ್ತು ಸಂಗ್ರಹಿಸಬಹುದು.ಅಂಥ ಕಟ್ಟಡ ಅಥವಾ ನಿವೇಶನಕ್ಕಾಗಿ ವಿಧಿಸಿದ ಸ್ವತ್ತು ತೆರಿಗೆಯು ಮೊದಲ ವರ್ಷಕ್ಕಾಗಿ ಪಾವತಿಸಬೇಕಾದ ತೆರಿಗೆಯು ಎರಡು ಪಟ್ಟಾಗಿರತಕ್ಕದ್ದು.