ಬೆಂಗಳೂರು : ರಾಜ್ಯ ಸರಕಾರಿ ನೌಕರರು ಸೇವೆ ಸಲ್ಲಿಸುತ್ತಲೇ ಬೇರೆ ಹುದ್ದೆಗೆ ನೇಮಕಾತಿ ಹೊಂದಲು ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲೇ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ NOC (No objection Certificate) ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿತ್ತು.ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿ ಆಯ್ಕೆಯಾದ ನಂತರವೂ ಇಲಾಖೆಯಿಂದ NOC ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ.
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 2(ಎ) ಉಪ ಪ್ರಕರಣವನ್ನು ಪ್ರಕರಣ 8ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ, ಕರಡು ನಿಯಮಗಳನ್ನು ದಿನಾಂಕ:07.08.2020ರ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ IV-ಎ(ನಂ-391)ರಲ್ಲಿ ಅಧಿಸೂಚನೆ ಹೊರಡಿಸಿದೆ.
3ನೇ ಪ್ರಕರಣದ 1ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ನಿಯಮ 5ಕ್ಕೆ ತಿದ್ದುಪಡಿ.- ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ (ಇನ್ನು ಮುಂದೆ ಸದರಿ ನಿಯಮಗಳು ಎಂದು ಕರೆಯಲ್ಪಡುವ) ನಿಯಮ 5ರ ಉಪನಿಯಮ (4)ರ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು. ಎಂದರೆ-
(4) ಒಬ್ಬ ಸರ್ಕಾರಿ ನೌಕರನು ಅಥವಾ ಬೇರೆ ಯಾವುದೇ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರ್ಕಾರದಲ್ಲಿ
ಅಥವಾ ಸಾರ್ವಜನಿಕ ವಲಯದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯು, ರಾಜ್ಯ ಸಿವಿಲ್ ಸೇವೆಗಳಲ್ಲಿನ
ಹುದ್ದೆಯೊಂದಕ್ಕೆ ಆತನ ಆಯ್ಕೆ ಅಧಿಸೂಚನೆಗೊಂಡ ಕೂಡಲೇ ಆದರೆ ಅವನಿಗೆ ನೇಮಕಾತಿ ಆದೇಶ ಹೊರಡಿಸುವ
ಮುನ್ನ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಅವನನ್ನು ಅಂತಹ ಹುದ್ದೆಗೆ ನೇಮಕಾತಿ ಮಾಡಲು ಸಕ್ಷಮವಾದ
ಪ್ರಾಧಿಕಾರಕ್ಕೆ ಅದನ್ನು ಹಾಜರುಪಡಿಸದ ಅಥವಾ ಅದನ್ನು ನಿಯಮ 11ರ ಅನುಸಾರ ಪಡೆದಿದ್ದಾನೆ ಎಂದು
ಪರಿಗಣಿತಗೊಳ್ಳದ ಹೊರತು ಆತನು ನೇಮಕಾತಿ ಹೊಂದಲು ಅರ್ಹನಾಗಿರತಕ್ಕದ್ದಲ್ಲ.
ವಿವರಣೆ: ಈ ಉಪ ನಿಯಮದ ಉದ್ದೇಶಕ್ಕಾಗಿ ‘ಸಾರ್ವಜನಿಕ ವಲಯದ ಸಂಸ್ಥೆ ಎಂದರೆ,-
(ಎ) ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಸರ್ಕಾರದ ಷೇರು ಬಂಡವಾಳ ಹೊಂದಿದ ಕರ್ನಾಟಕ ಕೊ-ಆಪರೇಟಿವ್ ಸೊಸೈಟಿಗಳ ಅಧಿನಿಯಮ, 1959ರ (1959ರ ಕರ್ನಾಟಕ ಅಧಿನಿಯಮ 11) ಅಡಿ ನೋಂದಣಿಗೊಂಡ ಅಥವಾ ನೋಂದಣಿಗೊಂಡಂತೆ ಪರಿಗಣಿತಗೊಂಡ ಕೊ-ಆಪರೇಟಿವ್ ಸೊಸೈಟಿ:
(ಬಿ) ರಾಜ್ಯ ಸರ್ಕಾರದಿಂದ ಸ್ಥಾಪನೆಗೊಂಡ ಅಥವಾ ನಿರ್ವಹಿಸಲ್ಪಡುತ್ತಿರುವ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆ;
(ಸಿ) ಕಂಪನಿಗಳ ಅಧಿನಿಯಮ, 2013ರ (2013ರ ಕೇಂದ್ರ ಅಧಿನಿಯಮ 18) ಅರ್ಥವ್ಯಾಪ್ತಿಯೊಳಗಿನ ಸರ್ಕಾರಿ ಕಂಪನಿ;
(ಡಿ) ಸ್ಥಳೀಯ ಪ್ರಾಧಿಕಾರ;
(ಇ) ರಾಜ್ಯ ಅಥವಾ ಕೇಂದ್ರದ ಅಧಿನಿಯಮದ ಅಡಿ ಸ್ಥಾಪನೆಗೊಂಡು ರಾಜ್ಯ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಶಾಸನಬದ್ಧ ಸಂಸ್ಥೆ ಅಥವಾ ನಿಗಮ;
(ಎಫ್) ಯಾವುದೇ ಕಾನೂನಿನ ಅಡಿ ಅಥವಾ ಮೂಲಕ ಸ್ಥಾಪನೆಗೊಂಡ ಅಥವಾ ಸ್ಥಾಪನೆಗೊಂಡಂತೆ ಪರಿಗಣಿತಗೊಂಡ ರಾಜ್ಯದಿಂದ ಧನ ಪಡೆಯುವ ವಿಶ್ವವಿದ್ಯಾಲಯ.
3. ನಿಯಮ 11ಕ್ಕೆ ತಿದ್ದುಪಡಿ.- ಸದರಿ ನಿಯಮಗಳ ನಿಯಮ 11ರ ಬದಲಿಗೆ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು.
ಎಂದರೆ-
11. ಸರ್ಕಾರಿ ನೌಕರರ ಅರ್ಜಿಗಳಿಗೆ ಸಂಬಂಧಿಸಿದ ಕಾರ್ಯವಿಧಾನ.
(1) ಯಾವುದೇ ಸೇವೆ ಅಥವಾ ಹುದ್ದೆಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸುವ ಒಬ್ಬ ಸರ್ಕಾರಿ ನೌಕರನು ತನ್ನ ಅರ್ಜಿಯನ್ನು ನೇರವಾಗಿ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಆತನ ಆಯ್ಕೆಯನ್ನು ಅಧಿಸೂಚಿತಗೊಳಿಸಿದ ಕೂಡಲೇ, ಆತನು ಆಯ್ಕೆಯಾದ ವಾಸ್ತವಾಂಶವನ್ನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಇಲಾಖಾ ಮುಖ್ಯಸ್ಥರಿಗೆ ತಿಳಿಸತಕ್ಕದ್ದು ಹಾಗೂ ಆತನು ಆಯ್ಕೆಯಾದ ಹುದ್ದೆಯ ನೇಮಕಾತಿಯನ್ನು ಒಪ್ಪಿಕೊಳ್ಳಲು ಅನುವಾಗುವಂತೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವಂತೆ ಕೋರತಕ್ಕದ್ದು.
(2) ಸರ್ಕಾರಿ ನೌಕರನು ಶಿಸ್ತುಕ್ರಮಕ್ಕೆ ಒಳಗೊಂಡಿದ್ದಲ್ಲಿ ಅಥವಾ ಆತ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ನಡವಳಿಗಳನ್ನು ಎದುರಿಸುತ್ತಿದ್ದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ಅಥವಾ ಸರ್ಕಾರಿ ನೌಕರ ಮತ್ತು ಸರ್ಕಾರದ ನಡುವೆ ಮಾಡಿಕೊಳ್ಳಲಾದ ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾದಂತಹ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಾರದೆಂದು ಇಲಾಖಾ ಮುಖ್ಯಸ್ಥರು ಪರಿಗಣಿಸಿದ ಹೊರತು, ಸಾಮಾನ್ಯವಾಗಿ ಇಲಾಖಾ ಮುಖ್ಯಸ್ಥರು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು, ಸಾಧ್ಯವಾದಷ್ಟು ಬೇಗನೆ ಆದರೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿದ ಅರ್ಜಿಯ ದಿನಾಂಕದ ಮೂವತ್ತು ದಿನಗಳ ಅವಧಿಯ ಒಳಗಾಗಿ ಇಲಾಖಾ ಮುಖ್ಯಸ್ಥರು ಈ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಅದನ್ನು ಸಂಬಂಧಿತ ಸರ್ಕಾರಿ ನೌಕರ ಮತ್ತು ಆಯ್ಕೆ ಪ್ರಾಧಿಕಾರ ಮತ್ತು ಉಪ-ನಿಯಮ (1)ರಲ್ಲಿ ಉಲ್ಲೇಖಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು ಹಾಗೂ ಆ ರೀತಿ ಮಾಡಲು ವಿಫಲವಾದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಪರಿಗಣಿತಗೊಳ್ಳತಕ್ಕದ್ದು: