ಬೆಂಗಳೂರು : ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ಕೆ.ಜಿ.ಐ.ಡಿ. ಆನ್‌ಲೈನ್ ಸೇವೆಗಳನ್ನು ಒದಗಿಸಲು NTT DDO Code (Non Treasury Transaction DDO Code) ಗಳನ್ನು ಉಪಯೋಗಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮೆಯ ಎಲ್ಲಾ ಸೇವೆಗಳನ್ನು ಪ್ರಸ್ತುತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಈ ಸೇವೆಗಳನ್ನು ಪಡೆಯಲು ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಅರ್ಜಿಗಳನ್ನು ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಮುಖಾಂತರ ವಿಮಾ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳಿಗೆ ವಿಮಾ ಇಲಾಖೆಯ Login ಅನ್ನು ಖಜಾನೆ-II ರಲ್ಲಿ DDO Code ಆಧಾರದ ಮೇಲೆ ನೀಡಲಾಗಿರುತ್ತದೆ. ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳು ಮತ್ತು ನೌಕರರು ನಿಯೋಜನೆಯ ಮೇಲೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಂತಹ ಕಛೇರಿಗಳಲ್ಲಿ ವೇತನ ಬಟವಾಡೆ ಅಧಿಕಾರಿಗಳು ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ವೇತನವನ್ನು ರಾಜ್ಯದ ಸಂಚಿತ ನಿಧಿಯಿಂದ ಖಜಾನೆ ಮೂಲಕ ಸೆಳೆಯುವುದಿಲ್ಲದ ಕಾರಣ ನಿಗಮ, ಮಂಡಳಿಗಳ ಮತ್ತು ಸ್ವಾಯತ್ತ ಸಂಸ್ಥೆಗಳ ವೇತನ ಬಟವಾಡೆ ಅಧಿಕಾರಿಗಳಿಗೆ ಖಜಾನೆ-IIನಲ್ಲಿ DDO Code ಅನ್ನು ಹಂಚಿಕೆ ಮಾಡಿರುವುದಿಲ್ಲ. ಆದ್ದರಿಂದ ಇವರು ವಿಮಾ ಇಲಾಖೆಯ ತಂತ್ರಾಂಶಕ್ಕೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲದ ಕಾರಣ ನಿಯೋಜನೆ ಮೇಲೆ ನಿಗಮ, ಮಂಡಳಿ/ ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಮೇಲ್ಕಂಡ ಸಮಸ್ಯೆಯನ್ನು ನಿವಾರಿಸಲು ಉಲ್ಲೇಖಿತ ಪತ್ರದಲ್ಲಿ ವಿಮಾ ನಿರ್ದೇಶಕರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ, ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯಲು ಅನುವಾಗುವಂತೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ವೇತನ ಬಟವಾಡೆ ಅಧಿಕಾರಿಗಳಿಗೆ NTT DDO Code (Non Treasury Transaction DDO Code) ಇಲಾಖೆಯ ಆನ್‌ಲೈನ್ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡಲು ಸರ್ಕಾರವು ತೀರ್ಮಾನಿಸಿ ಈ ಕೆಳಗಿನಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ನಿಗಮ ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಅನ್ಯ ಸೇವೆ/ನಿಯೋಜನೆಯ ಮೇಲೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಒದಗಿಸಲು ಅನುವಾಗುವಂತೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಕೋರಿಕೆಯನುಸಾರ NTT DDO Code (Non Treasury Transaction DDO Code) ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಒದಗಿಸಲು ಸರ್ಕಾರವು ಅನುಮತಿಯನ್ನು ನೀಡಿ ಆದೇಶಿಸಿದೆ.