ಬೆಂಗಳೂರು : 2024-25ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಸಂಘಟಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗ ನಗರದಲ್ಲಿ ದಿನಾಂಕ:18-05-2025 ರಿಂದ 20-05-2025 ರವರೆಗೆ (ಮೂರು ದಿನ) ನಡೆಸಲು ತೀರ್ಮಾನಿಸಲಾಗಿರುತ್ತದೆ. ಸದರಿ ಕ್ರೀಡಾಕೂಟವನ್ನು ಈ ಕೆಳಕಂಡಂತೆ ಆಯೋಜಿಸಲು ಸೂಚಿಸಿ ಸುತ್ತೋಲೆಯನ್ನು ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿಗಳು:
ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಕೆ.ಜಿ.ಐ.ಡಿ. ಸಂಖ್ಯೆಯನ್ನು ಹೊಂದಿರುವ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಆನೈನ್ ಮೂಲಕ ನೊಂದಣಿ ಮಾಡಿಕೊಂಡಲ್ಲಿ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಾಗೂ ಸೌಲಭ್ಯ ಪಡೆಯಲು ಮಾತ್ರ ಅರ್ಹರಿರುತ್ತಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಹಾಗೂ ಕ್ರೀಡಾಕೋಟಾದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
ಎಲ್ಲಾ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸಲು ನೀಡಿರುವ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು, ಸಂಗೀತ, ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
ದಿನಗೂಲಿ ನೌಕರರು, ಅರೆಕಾಲಿಕ ನೌಕರರು, ಕ್ಷೇಮಾಭಿವೃದ್ಧಿ ನೌಕರರು, ಗುತ್ತಿಗೆ ನೌಕರರು, ನಿಗಮ/ಮಂಡಳಿ ನೌಕಕರು ಮತ್ತು ಇತರೇ ಖಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
ಪೊಲೀಸ್ (ಸಮವಸ್ತ್ರಧಾರಿಗಳಿಗೆ) ಹಾಗೂ ಕ್ರೀಡಾ ಮೀಸಲಾತಿಯಲ್ಲಿ ಆಯ್ಕೆಯಾದ ಎಲ್ಲಾ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
ಅರಣ್ಯ ಇಲಾಖೆಗಳ ಮತ್ತು ಅಗ್ನಿಶಾಮಕ ಇಲಾಖೆಗಳ ಬ್ಯಾಡ್ಜ್ ನಂಬರ್ ಸಿಬ್ಬಂದಿಗಳು (ಕ್ರೀಡಾ ಮೀಸಲಾತಿಯಡಿ ಆಯ್ಕೆಯಾದ ನೌಕರರನ್ನು ಹೊರತುಪಡಿಸಿ) ಹಾಗೂ ಲಿಪಿಕ ಸಿಬ್ಬಂದಿಗಳು ಸಹ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ನೀಡುವುದು.
1 ಟ್ರ್ಯಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಕ್ ಮತ್ತು 1 ಫೀಲ್ಡ್ ಸೇರಿ ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು.
45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ.
ಏಕಕಾಲದಲ್ಲಿ ಸ್ಪರ್ಧೆಗಳನ್ನು ನಡೆಸಲಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧಿಗಳನ್ನು ಕಾಯುವುದಿಲ್ಲ.
ಕರಕುಶಲ ವಸ್ತು ಪ್ರದರ್ಶನದಲ್ಲಿ ಸಿದ್ಧವಿರುವ ವಸ್ತುಗಳ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಸ್ಥಳದಲ್ಲಿ ತಯಾರಾಗಿ (ಮೊದಲನೇ ದಿನ) ಇಡಬೇಕು. 2ನೇ ದಿನ ತೀರ್ಪುಗಾರರಿಂದ ಪರಿಶೀಲಿಸಲಾಗುವುದು.
ಸ್ಪರ್ಧೆ ನಡೆಯದ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಿಲ್ಲ.
ಸಂಘಟಕರೊಡನೆ ಅಥವಾ ತೀರ್ಪುಗಾರರೊಡನೆ ಅಸಭ್ಯವಾಗಿ ವರ್ತಿಸುವ ಕ್ರೀಡಾಪಟುಗಳನ್ನು ಕ್ರೀಡಾ ಸ್ಪರ್ಧೆಯಿಂದ ಹೊರಹಾಕುವುದಲ್ಲದೆ, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಪ್ಪಿತಸ್ಥ ಕ್ರೀಡಾಪಟುವಿನ ಮೇಲೆ ಸೇವಾ ನಿಯಮಗಳ ರೀತ್ಯಾ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು.
ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆ ಪ್ರಾರಂಭವಾಗುವ ನಿಗಧಿತ ಸಮಯಕ್ಕೆ ಕನಿಷ್ಠ 1.00 ಗಂಟೆ ಮುಂಚಿತವಾಗಿ ಹಾಜರಿದ್ದು, ಕ್ರೀಡಾ ಸಂಘಟಕನಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.
ಕ್ರೀಡಾ ಸ್ಪರ್ಧೆಗಳಲ್ಲಿ ಸಂಗೀತ, ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮದೇ ಆದ ಸಲಕರಣೆಗಳನ್ನು ತರತಕ್ಕದ್ದು.
ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಯ ತುಣುಕು ಇತ್ಯಾದಿಗಳಿಗೆ ಅವಕಾಶವಿಲ್ಲ.(ಫಿಲಂಟೂನ್
ಸಂಗೀತ, ನೃತ್ಯ, ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ.
ಸ್ಪರ್ಧಿಗಳು ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಆಯಾ ಜಿಲ್ಲೆಯ ಬಾವುಟದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಮೊದಲು ನೋಂದಾವಣೆ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ಹಾಜರಾತಿ ನೀಡಲಾಗುವುದು.
ಸರ್ಕಾರಿ ಆದೇಶ ಸಂ:ಎಫ್‌ಡಿ2/ಎಸ್‌ರ್ಆಎಸ್/2002, ಬೆಂಗಳೂರು, ದಿನಾಂಕ:27-11-2002ರಂತೆ ರಾಜ್ಯ ಸರ್ಕಾರದ ವತಿಯಿಂದ ನಡೆಸುವ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯಗಳನ್ನು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿದೆ.
ಈ ಕಛೇರಿಯ ಸಮ ಸಂಖ್ಯೆಯ ಸುತ್ತೋಲೆ ದಿನಾಂಕ:21-02-2025ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಸೂಚಿಸಿದೆ.
ಕೆಲವು ನೌಕರರು 2-4 ಕ್ರೀಡೆಗಳಲ್ಲಿ ಭಾಗವಹಿಸಿದ್ದು ಅಂತಹವರ ಪಟ್ಟಿಯನ್ನು ಕ್ರೂಢೀಕರಿಸಿ ಸಲ್ಲಿಸುವುದು. ಉದಾ: ಒಬ್ಬ ನೌಕರ ನಾಲ್ಕು ಕ್ರೀಡೆಗಳಲ್ಲಿ ಭಾಗವಹಿಸಿದ್ದಲ್ಲಿ ಅಂತಹ ನೌಕರನಿಗೆ ಒಂದು ಜೊತೆ ಟ್ರ್ಯಾಕ್ ಸೂಟ್ ನೀಡಲು ಕ್ರಮವಹಿಸುವುದು.
ಯಾವ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿರುವುದಿಲ್ಲವೋ ಅಂತಹ ಸ್ಪರ್ಧೆಗಳಿಗೆ ಕ್ರೀಡಾಪಟುವಲ್ಲದ ನೌಕರರನ್ನು ಸೇರ್ಪಡೆಗೊಳಿಸುವ ಕ್ರಮವನ್ನು ಕೈಬಿಡುವುದು. ಒಂದು ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದಲ್ಲಿ ಅಂತಹ ಜಿಲ್ಲೆಗಳ ಸಹಾಯಕ ನಿರ್ದೇಶಕರು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುವುದು.