ಬೆಂಗಳೂರು : ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ರಾಜ್ಯ ಸರ್ಕಾರದ ಆದೇಶದಲ್ಲಿ?
ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ ವಿವಾಹ-ವಿಚ್ಚೇದಿತ/ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆಯ ಅವಶ್ಯಕತೆ ಇರುತ್ತದೆಂದು ತಿಳಿಸಿ ಈ ರಜೆಯ ಸೌಲಭವನ್ನು ಅಂತಹ ಪುರುಷ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸಬೇಕೆಂದು ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿರುತ್ತವೆ. ಮೂಲತಃ ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವಿಸ್ತರಿಸಿದ್ದಾಗ್ಯೂ ಏಕಪೋಷಕರಾಗಿರುವ ಪುರುಷ ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗುವುದನ್ನು ಪರಿಗಣಿಸಿ ಸರ್ಕಾರ ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೊಳಪಟ್ಟು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಚೇದಿತ/ವಿಧುರ ಸರ್ಕಾರಿ ಪುರುಷ ನೌಕರರಿಗೂ ಸಹ ವಿಸ್ತರಿಸಲು ತೀರ್ಮಾನಿಸಿದೆ. ಅದರಂತೆ, ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ:ಆಇ 3(ಇ) ಸೇನಿಸೇ 2023, ಬೆಂಗಳೂರು,ದಿನಾಂಕ:9.6.2023
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಛೇದಿತ/ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆಯ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದೆ. ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ದಿನಾಂಕ:21.06.2021 ರ ಸರ್ಕಾರಿ ಆದೇಶ ಸಂಖ್ಯೆ ಆಇ 4(ಇ) ಸೇನಿಸೇ 2021 ರಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆಯನ್ನು ಮಂಜೂರು ಮಾಡತಕ್ಕದ್ದು.
ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ.









