ಧಾರವಾಡ : ಈಗಾಗಲೇ ರೈತರ ಜಮೀನುಗಳು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತೋರಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ಧಾರವಾಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಹಲವು ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಅಸ್ತಿಗೆ ಜೋಡಣೆಯದದ್ದು ಕಂಡುಬಂದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ಕುಟುಂಬಕ್ಕೆ ಸೇರಿದ ಜಮೀನುಗಳು ಪಿತ್ರಾರ್ಜಿತವಾಗಿದ್ದು, ಅವುಗಳನ್ನು ಈ ರೈತರು ಯಾರಿಂದಲೂ ದಾನವಾಗಿ ಪಡೆದಿಲ್ಲ ಆದರೂ ಇವರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿಗೆ ಈ ಜಮೀನು ಒಳಪಟ್ಟಿದೆ ಎಂದು ನಮೂದಾಗಿದ್ದು, ಅದನ್ನು ತೆಗೆದು ಹಾಕಲು ರೈತರು ವಕ್ಫ್ ಕಚೇರಿ, ತಹಶೀಲ್ದಾರ್ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದನೆ ನೀಡಲಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತಮ್ಮ ಜಮೀನನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಈ ರೈತರೆಲ್ಲ ಉಪ್ಪಿನ ಬೆಟಗೇರಿ ಗ್ರಾಮದವರು. 3 ಎಕರೆ, 5 ಎಕರೆ ಹಾಗೂ 20 ಎಕರೆ ಹೊಲಗಳ ಪಹಣಿ ಪತ್ರದಲ್ಲಿ 2021, 2022 ಹಾಗೂ 2023 ರಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟಿವೆ ಎಂದು ನಮೂದಾಗಿದೆ. ಇದೇ ಪಹಣಿ ಪತ್ರದಲ್ಲಿ 2018, 2019ರಲ್ಲಿ ತೆಗೆದು ನೋಡಿದಾಗ ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿಲ್ಲ. 2021, 2022ರಲ್ಲಿ ಈ ರೀತಿ ಪಹಣಿ ಪತ್ರದ ಋಣಗಳು ಕಾಲಂನಲ್ಲಿ ವಕ್ಫ್ ಆಸ್ತಿಗೆ ಜಮೀನು ಒಳಪಟ್ಟಿದೆ ಎಂದು ನಮೂದಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ 1440 ರೈತರ ಜಮೀನುಗಳ ಪಹಣಿ ಕಾಲಂ 11 ರಲ್ಲಿ ದಿಢೀರನೆ ವಕ್ಫ್ ಮಂಡಳಿ ಬೆಂಗಳೂರು ಎಂದು ನಮೂದಿಸಲಾಗಿದೆ. ರೈಲ್ವೆ ಯೋಜನೆ, ಹೆದ್ದಾರಿ, ಕೈಗಾರಿಕಾ ಪ್ರದೇಶಕ್ಕೆ ಭೂಮಿ ಸ್ವಾಧೀನ ಮಾಡಿಕೊಂಡ ಈ ಜಾಗದ ಮಾಲೀಕರಿಗೆ ಪರಿಹಾರ ನೀಡುವಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿರುವುದು ಬೆಳಕಿಗೆ ಬಂದಿದೆ.