ಬೆಂಗಳೂರು : ರೈಲ್ವೆ ಇಲಾಖೆಯ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳಲ್ಲಿ ಕನ್ನಡಿಗರಿಗೆ ಪದೇ ಪದೇ ಅನ್ಯಾಯವಾಗುತ್ತಿರುವುದು ಮುಂದುವರಿದಿದೆ. ಮಾರ್ಚ್ 17ರಂದು ನಿಗದಿಯಾಗಿರುವ ವಿವಿಧ ಹುದ್ದೆಗಳ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಉತ್ತರಿಸುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸುವ ಮೂಲಕ ರೈಲ್ವೆ ಇಲಾಖೆ ಅಭ್ಯರ್ಥಿಗಳಿಗೆ ಶಾಕ್ ನೀಡಿದೆ.
ರೈಲ್ವೆ ಇಲಾಖೆಯು ಗುಡ್ಸ್ ರೈಲು ಮ್ಯಾನೇಜರ್ ಮತ್ತು ಎಲ್ಡಿಸಿಇ (LDCE) ಹುದ್ದೆಗಳ ಮುಂಬಡ್ತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಈ ಮೊದಲು ಹೊರಡಿಸಿದ್ದ ಆದೇಶದಲ್ಲಿ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬರೆಯಲು ಅವಕಾಶವಿರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಇದರಿಂದಾಗಿ ಅನೇಕ ಕನ್ನಡಿಗ ಅಭ್ಯರ್ಥಿಗಳು ಕಳೆದ ಕೆಲವು ಸಮಯದಿಂದ ಕನ್ನಡದಲ್ಲೇ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿದ್ದರು.
ಕೊನೆ ಕ್ಷಣದ ಬದಲಾವಣೆ:
ಪರೀಕ್ಷೆಗೆ ಕೇವಲ 4 ದಿನಗಳು ಬಾಕಿ ಇರುವಾಗ, ಅಂದರೆ ಮಾರ್ಚ್ 13ರಂದು ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟಿಸಿರುವ ಇಲಾಖೆಯು, ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ತಿಳಿಸಿದೆ. ಈ ಹಠಾತ್ ನಿರ್ಧಾರದಿಂದ ಕನ್ನಡದಲ್ಲೇ ಪರೀಕ್ಷೆ ಬರೆಯಲು ಸಿದ್ಧರಾಗಿದ್ದ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ.
ಮೊದಲು ಕನ್ನಡದಲ್ಲಿ ಅವಕಾಶ ನೀಡಿ, ಈಗ ಏಕಾಏಕಿ ರದ್ದು ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಈ ಬದಲಾವಣೆ ಮಾಡಿರುವುದರಿಂದ ಮೇಲ್ಮನವಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸಮಯವಿಲ್ಲದಂತಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು, “ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ (CBT) ಆಗಿರುವುದರಿಂದ ತಾಂತ್ರಿಕ ಕಾರಣಗಳಿಂದ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಲಭ್ಯವಿದೆ. ಈ ಬಗ್ಗೆ ಡಿಸೆಂಬರ್ 25ರಂದೇ ಸ್ಪಷ್ಟೀಕರಣ ನೀಡಲಾಗಿತ್ತು” ಎಂದು ಸಮರ್ಥಿಸಿಕೊಂಡಿದ್ದಾರೆ.








