ಬೆಂಗಳೂರು :2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಹ ಸಂಬಂಧ ಕಲ್ಪಿಸುವುದು ಸೇತುಬಂಧ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
2025-26ನೇ ಸಾಲಿಗೆ 1ನೇ ತರಗತಿಗೆ (ಕಲಿ-ನಲಿ) ಶಾಲಾ ಪ್ರಾರಂಭದ ಮೊದಲ 40 ದಿನಗಳು ವಿದ್ಯಾಪ್ರವೇಶ ಹಾಗೂ 2 ರಿಂದ 10ನೇ ತರಗತಿಗಳಿಗೆ ಮೊದಲ 15 ದಿನಗಳನ್ನು ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ತರಗತಿವಾರು ಮತ್ತು ವಿಷಯವಾರು ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳಿಗೆ ಸಂಬಂಧಿಸಿದ ಕಲಿಕಾ ಸಾಮಗ್ರಿಯು DSERT website ನಲ್ಲಿ ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ಕೆಳಕಂಡ ಕಾರ್ಯತಂತ್ರಗಳನ್ನು ಅನುಸರಿಸಿ ಸೇತುಬಂಧ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.
ಸೇತುಬಂಧ ಕಾರ್ಯಕ್ರಮದ ಅನುಷ್ಠಾನ ಕಾರ್ಯತಂತ್ರಗಳು:
2025-26ನೇ ಶೈಕ್ಷಣಿಕ ಸಾಲಿಗೆ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿಯ 01ನೇ ತರಗತಿಗೆ ವಿದ್ಯಾ ಪ್ರವೇಶ ಹಾಗೂ 02 ಮತ್ತು 03ನೇ ತರಗತಿಗಳಿಗೆ ಸೇತುಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ಹೊರಡಿಸುವ ಸುತ್ತೋಲೆಯನ್ನು ಅನುಸರಿಸುವುದು.
ಕಲಿ-ನಲಿ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ 01ನೇ ತರಗತಿಗೆ 40 ದಿನಗಳ ವಿದ್ಯಾಪ್ರವೇಶ ಹಾಗೂ 02 ರಿಂದ 10ನೇ ತರಗತಿಗಳಿಗೆ ಕನ್ನಡ & ಆಂಗ್ಲ ಮಾಧ್ಯಮ ಹಾಗೂ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳ ಸೇತುಬಂಧ ಸಾಹಿತ್ಯ DSERT website ನಲ್ಲಿ ಲಭ್ಯವಿದೆ.
ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ತರಗತಿ ಪ್ರಕ್ರಿಯೆಯನ್ನು ಅನುಕೂಲಿಸಲು ಚಟುವಟಿಕೆ ಆಧಾರಿತವಾಗಿ ಕಲಿಕಾ ತಂತ್ರಗಳನ್ನು ರೂಪಿಸಲಾಗಿದೆ ಮತ್ತು ಈ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿಯನ್ನು ನೀಡಲಾಗಿದ್ದು, ಶಿಕ್ಷಕರು ಸದರಿ ಸಾಹಿತ್ಯವನ್ನು ಬಳಸಿ ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧ ಕಾರ್ಯಕ್ರಮವನ್ನು ಆಯೋಜಿಸುವುದು.
ಸಾಹಿತ್ಯದಲ್ಲಿ ನೀಡಿರುವ ಅಥವಾ ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಮತ್ತು ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆ ರೂಪಿಸಿಕೊಂಡು ಅನುಷ್ಠಾನಿಸಲು ಕ್ರಮವಹಿಸುವುದು.
ಆಯಾ ತರಗತಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧನೆಗೆ (FLN) ಎಲ್ಲಾ ಹಂತದಲ್ಲಿ ಕ್ರಮವಹಿಸುವುದು.
ನೈದಾನಿಕ ಪೂರ್ವ ಅವಲೋಕನ ಪರೀಕ್ಷೆಯು (Diagnostic Test) ಎರಡು ಸ್ವರೂಪದ ಪ್ರಶ್ನೆಗಳನ್ನು ಹೊಂದಿರಬೇಕು. (ಉದಾ: ಶೇ.40 FLN, ಶೇ.60 ತರಗತಿಗನುಗುಣವಾಗಿ ಗಳಿಸಬೇಕಾದ ಕಲಿಕಾ ಫಲಗಳನ್ನಾಧರಿಸಿದ ಪ್ರಶ್ನೆಗಳು)
ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ಸದರಿ ಸಾಹಿತ್ಯದಲ್ಲಿ ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಅಗತ್ಯತೆಗನುಗುಣವಾಗಿ ಸಿದ್ಧಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಮತ್ತು ಮಕ್ಕಳಲ್ಲಿ ಅಪೇಕ್ಷಿತ ಕಲಿಕಾ ಫಲಗಳ ಕಲಿಕೆಯಾಗಿದೆ ಎಂಬುದನ್ನು ಒಟ್ಟಾರೆಯಾಗಿ ಕೃತಿ ಸಂಪುಟದಲ್ಲಿ ದಾಖಲಿಸುವುದು.
3 ರಿಂದ 10ನೇ ತರಗತಿಯವರೆಗೆ FLN ಸಾಧಿಸದೇ ಇರುವ ಮಕ್ಕಳು ಮತ್ತು ಕಲಿಕಾ ಅಂತರ ಹೊಂದಿರುವ ಮಕ್ಕಳು ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದು.
FLN ಸಾಧಿಸದ ಮಕ್ಕಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಅನುಪಾಲನೆ ಮಾಡುವುದು.
ವಿದ್ಯಾರ್ಥಿಗಳ ಪುಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು (SAP) ಸಿದ್ದಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು.
ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಮತ್ತು ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸರಳ ಚಟುವಟಿಕೆಗಳು, ಸಂಭಾಷಣೆ, ಅಭ್ಯಾಸ ಹಾಳೆಗಳು, ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.
ಸೇತುಬಂಧ ಕಾರ್ಯಕ್ರಮದ ಅವಧಿ ಮುಗಿದ ನಂತರವೂ ವಿದ್ಯಾರ್ಥಿಗಳಲ್ಲಿ ಬುನಾದಿ ಸಾಮಾರ್ಥ್ಯಗಳು ಹಾಗೂ ತರಗತಿಗನುಗುಣವಾಗಿ ಗಳಿಸಬೇಕಾದ ಸಾಮರ್ಥ್ಯಗಳು ಗಳಿಕೆ ಆಗಿರದಿದ್ದಲ್ಲಿ, ಅಂತಹವರನ್ನು ಗುರುತಿಸಿ ಆಯಾ ತರಗತಿಯಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನೀಡುವಾಗ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು ಅನುಕೂಲಿಸುವುದು.
ಮೇಲ್ವಿಚಾರಣೆ ಮತ್ತು ಉಸ್ತುವಾರಿ
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಉಪನಿರ್ದೇಶಕರು ಅಭಿವೃದ್ಧಿ ರವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಸ್ತುವಾರಿ ಅಧಿಕಾರಿಗಳ ಸಭೆ ನಡೆಸಿ ಸೇತುಬಂಧ ಕಾರ್ಯಕ್ರಮದ ಅನುಷ್ಠಾನ ಹಾಗೂ ಸದರಿ ಸುತ್ತೋಲೆಯ ಅನುಷ್ಠಾನಾತ್ಮಕ ಕ್ರಮಗಳ ಬಗ್ಗೆ ಚರ್ಚಿಸಿ ಅನುಪಾಲನೆಗೆ ಸೂಕ್ತ ಜವಾಬ್ದಾರಿಯನ್ನು ನಿಗದಿಪಡಿಸುವುದು.
ಎಲ್ಲಾ ಶಿಕ್ಷಕರು ಸೇತುಬಂಧ ಸಾಹಿತ್ಯ ಬಳಸುತ್ತಿರುವ ಬಗ್ಗೆ, ಖಾತ್ರಿ ಪಡಿಸಿಕೊಳ್ಳುವುದು ಮತ್ತು ಶಾಲಾ ಶೈಕ್ಷಣಿಕ ಯೋಜನೆ (SAP) ರೂಪಿಸಲು ಅಗತ್ಯ ಮಾರ್ಗದರ್ಶನ ನೀಡಿ ಅನುಪಾಲನೆ ಮಾಡುವುದು.
ಮಕ್ಕಳ ಕಲಿಕಾ ಪ್ರಗತಿಯನ್ನು ಕೃತಿ ಸಂಪುಟದಲ್ಲಿ ಶಿಕ್ಷಕರು ದಾಖಲಿಸುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳುವುದು.
ತಾಲೂಕು ಮತ್ತು ಜಿಲ್ಲಾ ಹಂತದ ಕ್ಷೇತ್ರ ಉಸ್ತುವಾರಿ ಅಧಿಕಾರಿಗಳು ನಿಯಮಿತವಾಗಿ ಶಾಲೆಗೆ ಭೇಟಿ ನೀಡಿ ಸೇತುಬಂಧ ಕಾರ್ಯಕ್ರಮದ ಪ್ರಗತಿ ಪರಿಶೀಲಿಸುವುದು ಮತ್ತು ಅಗತ್ಯ ಮಾರ್ಗದರ್ಶನ ನೀಡುವುದು.
ಜಿಲ್ಲಾ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸೇತುಬಂಧ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡುವುದು.
ಉಪ ನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಇವರು ತಮ್ಮ ಜಿಲ್ಲೆಯ ಪ್ರತಿ ಮಗು FLN ಸಾಮಾರ್ಥ್ಯಗಳು ಹಾಗೂ ಆಯಾ ತರಗತಿಯ ನಿರ್ದಿಷ್ಟ ಸಾಮರ್ಥ್ಯ ಗಳಿಸುವಂತೆ ಶಾಲಾ ಹಂತದಲ್ಲಿ ಕ್ರಮವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
ಸೇತುಬಂಧ ಕಾರ್ಯಕ್ರಮದ ಪ್ರಗತಿಯನ್ನು ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ, ವರದಿಯನ್ನು DSERT ಕಛೇರಿಗೆ ಸಲ್ಲಿಸುವುದು ಹಾಗೂ ಈ ವರದಿಯನ್ನು ಆಧರಿಸಿ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವುದು.