ಬೆಂಗಳೂರು : ರಾಜ್ಯದಲ್ಲಿ ಎಸ್, ಎಸ್ಟಿ ಸಮುದಾಯದ ಭೂಮಿ ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ವರ್ಗಗಳ ಕಾಯ್ದೆಯಡಿ ಮಂಜೂರಾದ ಜಮೀನು ಬೇರೊಬ್ಬರಿಗೆ ವರ್ಗಾವಣೆ/ಮಾರಾಟ ಮಾಡುವುದು ಅಕ್ರಮ ಹಾಗೂ ಅನೂರ್ಜಿತ, ಇಂಥ ಜಮೀನಿನ ಅಕ್ರಮ ವರ್ಗಾವಣೆ ಕುರಿತು ಕಾನೂನು ಕ್ರಮ ಜರುಗಿಸುವಂತೆ ಕೋರಿ ಲಿಖಿತವಾಗಿ ಅರ್ಜಿ ಸಲ್ಲಿಸಲು, ದೂರು ನೀಡಿ ವಿಚಾರಣೆಗೆ ಕೋರಲು ಯಾವುದೇ ಆಸಕ್ತ ವ್ಯಕ್ತಿಗೂ ಅವಕಾಶವಿದೆ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 114ರಲ್ಲಿನ 2 ಎಕರೆ 4 ಗುಂಟೆ ಜಾಗ ಪಿಟಿಸಿಎಲ್ ಕಾಯ್ದೆಯಡಿ 1950ರ ಪೂರ್ವದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಪೂಜಿಗ ಎಂಬುವವರ ಕಾನೂನುಬದ್ದ ವಾರಸುದಾರರ ಹೆಸರಿಗೆ ಪುನರ್ ಸ್ಥಾಪಿಸಲು ನಗರ ಜಿಲ್ಲಾಧಿಕಾರಿ 2022ರ ಅ.31ರಂದು ಆದೇಶ ಹೊರಡಿಸಿದ್ದರು.
ಈ ಆದೇಶ ರದ್ದು ಕೋರಿ ಬೆಂಗಳೂರಿನ ವಿಜಯ್ ಕುಮಾರ್ ಎಂಬುವವರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್. ದೇವದಾಸ್ ಅವರ ಪೀಠ, ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4 ಮತ್ತು 4(2) ಅನ್ವಯ ಎಸ್ಸಿ-ಎಸ್ಟಿ ವರ್ಗದವರಿಗೆ ಸರ್ಕಾರದಿಂದ ಮಂಜೂರಾದ ಜಮೀನು ಯಾವುದೇ ವರ್ಗಾವಣೆ ನಿಷೇಧಿಸುತ್ತದೆ. ಸೆಕ್ಷನ್ 4(1) ಹಾಗೂ (2) ಪ್ರಕಾರ ಸಿವಿಲ್ ನ್ಯಾಯಾಲಯದ ತೀರ್ಪು ಜಾರಿ ಹಾಗೂ ಯಾವುದೇ ಇತರ ಪ್ರಾಧಿಕಾರದ ಯಾವುದೇ ಆದೇಶದ ಮೂಲಕ ಮಂಜೂರಾದ ಯಾವುದೇ ಜಮೀನಿನ ಮಾರಾಟ ಸಹ ಅಕ್ರಮ. ಕಾಯ್ದೆಯ ಸೆಕ್ಷನ್ 5(1) ರಲ್ಲಿ ಅಡಿ ಎಸ್ ಸಿ , ಎಸ್ಟಿ ಸಮುದಾಯದವರಿಗೆ ಮಂಜೂರಾದ ಜಮೀನಿನ ವರ್ಗಾವಣೆ/ಮಾರಾಟದ ಕುರಿತು ಯಾವುದೇ ಆಸಕ್ತ ವ್ಯಕ್ತಿ ಸಹ ಲಿಖಿತ ಮಾಹಿತಿ ಮೇರೆಗೆ ಅರ್ಜಿ ಸಲ್ಲಿಸಬಹುದು. ಆ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಉಪ ವಿಭಾಗಾಧಿಕಾರಿ ಹೊಂದಿರುತ್ತಾರೆ ಎಂದು ಪೀಠ ತಿಳಿಸಿದೆ.








