ದಾವಣಗೆರೆ :ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕಾಭಿವೃದ್ದಿಯಾಗುತ್ತಿದ್ದು ಯೋಜನೆಗಳ ಅನುಷ್ಟಾನಕ್ಕೆ ಅಪಸ್ವರವೆತ್ತಿದವರು ರಾಜ್ಯಕ್ಕೆ ಬಂದು ಗ್ಯಾರಂಟಿ ಯೋಜನೆಗಳ ಅಧ್ಯಯನ ಮಾಡುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಇಂಧನ, ಸಾರಿಗೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಿಂದ ಏರ್ಪಡಿಸಲಾದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಚೇರಿ ಉದ್ಘಾಟನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟ, ಇದರಿಂದ ಆರ್ಥಿಕ ನಷ್ಟವಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿದ್ದರು. ಆದರೆ ಯೋಜನೆಗಳನ್ನು ಕಳೆದೆರಡು ವರ್ಷಗಳಿಂದ ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ. ಯಶಸ್ವಿಯಾದ ಯೋಜನೆಗಳ ಕುರಿತು ವಿವಿಧ ರಾಜ್ಯಗಳು ಕರ್ನಾಟಕಕ್ಕೆ ಬಂದು ಅಧ್ಯಯನ ಮಾಡುವಂತಾಗಿದೆ. ಪ್ರತಿ ಕುಟುಂಬಕ್ಕೆ 4 ರಿಂದ 6 ಸಾವಿರದಷ್ಟು ಯೋಜನೆಗಳ ಲಾಭ ಸಿಗುತ್ತಿರುವುದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದ್ದು ಪರೋಕ್ಷವಾಗಿ ಆರ್ಥಿಕಾಭಿವೃದ್ದಿಯಾಗಿ ಜೀವನ ನಿರ್ವಹಣಾ ಮಟ್ಟ ಹೆಚ್ಚಳವಾಗಿದೆ ಎಂದರು.
ಪಂಚ ಗ್ಯಾರಂಟಿ ನೇರವಾಗಿ ಜನರಿಗೆ ತಲುಪುವುದರಿಂದ ಇನ್ನೂ ಪಾರದರ್ಶಕವಾಗಿ ಯೋಜನೆಗಳನ್ನು ಅನುಷ್ಟಾನ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸಮಿತಿಯಿಂದ ಮಾಡಬೇಕಾಗಿದೆ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ತಲುಪಿಸುವಂತೆ ಮಾಡಬೇಕೆಂದರು.
ಶಕ್ತಿ ಯೋಜನೆಯಡಿ ದಾವಣಗೆರೆ ಕೆಎಸ್‍ಆರ್‍ಟಿಸಿಗೆ ರೂ.213.48 ಕೋಟಿ, ಅನ್ನಭಾಗ್ಯ ಯೋಜನೆಯಡಿ 3.44 ಲಕ್ಷ ಕಾರ್ಡ್‍ದಾರರು ಹಾಗೂ 12.42 ಲಕ್ಷ ಫಲಾನುಭವಿಗಳಿಗೆ ರೂ.346 ಕೋಟಿ, ಗೃಹಜ್ಯೋತಿ ಯೋಜನೆಯಡಿ 5.03 ಲಕ್ಷ ಆರ್.ಆರ್.ಸಂಖ್ಯೆ ಹೊಂದಿದ ಕುಟುಂಬಗಳಿಗೆ ರೂ.409 ಕೋಟಿ ವಿದ್ಯುತ್ ಸಬ್ಸಿಡಿ, ಗೃಹಲಕ್ಷ್ಮಿಯಡಿ 3.6 ಲಕ್ಷ ಯಜಮಾನಿಯರಿಗೆ ರೂ.1255 ಕೋಟಿ ಮತ್ತು ಯುವನಿಧಿಯಡಿ 9094 ವಿದ್ಯಾರ್ಥಿಗಳಿಗೆ ರೂ.13 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರು ನೂತನ ಕಚೇರಿ ಉದ್ಘಾಟನೆಯಲ್ಲಿ ಭಾಗಿಯಾಗಿ ಸಮಾರಂಭದಲ್ಲಿ ಮಾತನಾಡಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಕಳೆದೆರಡು ವರ್ಷಗಳಲ್ಲಿ ರೂ.82 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರ ಯೋಜನೆಗಳನ್ನು ಬರೀ ಚುನಾವಣೆಗಾಗಿ ರೂಪಿಸಿಲ್ಲ, ಜನರ ಕಲ್ಯಾಣಕ್ಕಾಗಿ ಅನುಷ್ಟಾನ ಮಾಡುತ್ತಿದೆ. ಉಳುವವನೇ ಭೂ ಒಡೆಯ, ಪದವೀಧರರಿಗೆ ಸ್ಟೈಫಂಡ್, ಸಿಇಟಿ ಮೂಲಕ ಉನ್ನತ ವ್ಯಾಸಂಗಕ್ಕೆ ಆಯ್ಕೆ, ರೈತರಿಗೆ ಉಚಿತ ವಿದ್ಯುತ್, ಬೆಂಗಳೂರು ಐಟಿ, ಬಿಟಿ ನಗರವನ್ನಾಗಿ ಅಭಿವೃದ್ದಿ, ಕಳೆದ ಸರ್ಕಾರದ ಅವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ ಎಲ್ಲವನ್ನು ಈಡೇರಿಸಲಾಗಿದೆ. ಈಗ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದು ಈ ಯೋಜನೆಗಳು ಮನೆ ಮಾತಾಗಿವೆ ಎಂದರು.
ಹಿಂದೆ ಗುಜರಾತ್ ಮಾದರಿ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಕರ್ನಾಟಕ ಮಾದರಿ ಎಂದು ಹೇಳುವಂತಾಗಿದ್ದು ಅನೇಕ ರಾಜ್ಯಗಳು ನಮ್ಮ ಪಂಚ ಗ್ಯಾರಂಟಿಗಳನ್ನು ಅನುಕರಣೆ ಮಾಡುವ ನಿಟ್ಟಿನಲ್ಲಿ ಸಾಗಿವೆ. ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 450 ಕೋಟಿಯಷ್ಟು ಮಹಿಳೆಯರು ಎಲ್ಲಾ ಜಿಲ್ಲೆಗಳಿಂದ ಪ್ರಯಾಣಿಸಿದ್ದು ಇದಕ್ಕಾಗಿ ರೂ.11188 ಕೋಟಿ ವೆಚ್ಚ ಭರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಕಾರ್ಡ್‍ದಾರರಿಗೆ ರೂ.11821 ಕೋಟಿ, ಗೃಹಜ್ಯೋತಿಯಡಿ 1.63 ಕೋಟಿ ಕುಟುಂಬಗಳಿಗೆ ರೂ.14950 ಕೋಟಿ, ಗೃಹಲಕ್ಷ್ಮಿಯಡಿ 1.22 ಕೋಟಿ ಯಜಮಾನಿಯರಿಗೆ ರೂ.42552 ಕೋಟಿ ಮತ್ತು ಯುವನಿಧಿಯಡಿ 2.74 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ರೂ.326.95 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರೂ.82000 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಇದರಿಂದ ಮಹಿಳೆಯರ ಆದಾಯ ಹೆಚ್ಚಳವಾಗಿ ಕೊಡು, ಕೊಳ್ಳುವಿಕೆ ಸಾಮಥ್ರ್ಯ ಹೆಚ್ಚಿದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.