ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಹೇಳಿಕೆಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದು, ಸರ್ಕಾರ ಬೀಳಿಸುವ ಕುರಿತು ಬಿಜೆಪಿ ಯತ್ನ ಮಾಡುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವಿ.ಎಸ್ ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮತ್ತು ಯತ್ನಾಳ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಮಾರು ಒಂದು ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಆ ಹಣವನ್ನು ಬಳಸಿ ಜನಪರವಾಗಿ ಕೆಲಸ ಮಾಡಿರುವಂತಹ ಜನಾದೇಶ ಇರುವಂತಹ ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಬರುವ ಡಿಸೆಂಬರ್ ನಲ್ಲಿ ರಾಜಕೀಯ ಕ್ರಾಂತಿ ಆಗಲಿದ್ದು, ಸರ್ಕಾರವನ್ನು ತೆಗೆಯುವಂತಹ ಪ್ರಯತ್ನ ಆಗುತ್ತೆ ಎನ್ನುವ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕ ಹೇಳಿದ್ದಾರೆ.
ಹಾಗಾಗಿ ಬಸನಗೌಡ ಪಾಟೀಲ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.ಇಂತಹ ಹೇಳಿಕೆಗಳನ್ನು ಕೊಟ್ಟಿರುವವರ ವಿರುದ್ಧ ಕೇಸ್ ದಾಖಲಿಸಬೇಕು. ಅವರನ್ನು ಕರೆದು ವಿಚಾರಣೆ ನಡೆಸಿ ಎಂದು ದೂರು ನೀಡಿದ್ದೇವೆ. ಪೊಲೀಸರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇಡಿ ಐಟಿ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದು ತಿಳಿಸಿದರು.
ಈಗಾಗಲೇ ಸಾವಿರ ಕೋಟಿ ಇಟ್ಟುಕೊಂಡು ಸಿಎಂ ಆಗಲು ಕಾದು ಕುಳಿತಿದ್ದಾರೆ ಎಂದು ಈ ವಿಷಯದ ಕುರಿತಾಗಿ ಎಲ್ಲ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಹೋಗಿದೆ. ಬಿಜೆಪಿ ಹಿಂಬದಿಯಿಂದ ಅಧಿಕಾರಕ್ಕೆ ಹಿಡಿಯುವಂತಹ ಕೆಲಸ ಮಾಡುತ್ತಿದೆ. ಈ ಕುರಿತಾಗಿ ಹಾಲಿ ಶಾಸಕರಾಗಿರುವಂತಹ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎರಡು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು.ಸಿಎಂ ಸಿದ್ದರಾಮಯ್ಯರ ಮೇಲೆ ವಿನಾಕಾರಣ ದೂರು ದಾಖಲಾಗುತ್ತಿದೆ.ಇದು ರಾಜಕೀಯ ಪ್ರೇರಿತವಾಗಿದ್ದು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಯತ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಎಷ್ಟೇ ಪ್ರಕರಣ ದಾಖಲಾದರು ಸಹ ಅದನ್ನು ಎದುರಿಸುತ್ತೇವೆ.