ಬೆಳಗಾವಿ : ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನಪರಿಷತ್ ನಲ್ಲಿ ಕೇಳಿಬಂದಿದೆ.
ರೈತರಿಗೆ, ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇಂತಹ ಯುವಕರನ್ನು ಮದುವೆಯಾಗುವ ಹೆಣ್ಣುಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನ ಪರಿಷತ್ನಲ್ಲಿ ಕೇಳಿಬಂದಿದ್ದು, ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ಟೇಬಲ್ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಪುಟ್ಟಣ್ಣ, ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ರೈತರ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ವ್ಯವಸಾಯ ಮಾಡುವ ಗಂಡುಮಕ್ಕಳು ನಮಗಾಗಿ ಮಠ ಕಟ್ಟಿಕೊಡಿ ಎಂದು ಒತ್ತಾಯಿಸುತ್ತಿರುವುದನ್ನು, ಪವಿತ್ರ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಳ್ಳುತ್ತಿರುವುದನ್ನು ಕೇಳಿದ್ದೇವೆ. ಹಾಗಾಗಿ ಸರ್ಕಾರ ಮದುವೆ ಆಗದ ಕೃಷಿಕ ಯುವಕರಿಗೆ ಯೋಜನೆ ರೂಪಿಸಬೇಕು ಎಂದು ಹೇಳಿದರು.
ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕನಿಷ್ಠ 10 ಲಕ್ಷ ರೂ.ಗಳನ್ನು ಆಕೆ ಹೆಸರಿಗೆ ಬ್ಯಾಂಕ್ ಠೇವಣಿ ಇಟ್ಟು,ಭದ್ರತೆ ಒದಗಿಸಿ ಭರವಸೆ ಮೂಡಿಸಬೇಕೆಂದು ಒತ್ತಾಯಿಸಿದ್ದಾರೆ.








