ಬೆಂಗಳೂರು : ಆರೋಗ್ಯ ಬಂಧು ಯೋಜನೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಆದೇಶದಲ್ಲಿ, ರಾಜ್ಯದಲ್ಲಿನ ಆಯ್ದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಕೆಲವು ಷರತ್ತುಗಳನ್ನು ವಿಧಿಸಿ, ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಮತ್ತು ಸಂಸ್ಥೆ/ ನಿಗಮಗಳಿಗೆ ವಹಿಸಿಕೊಡಲು ಆರೋಗ್ಯ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಆದೇಶದಲ್ಲಿ ಡಾ: ನಂಜುಂಡಪ್ಪ ಸಮಿತಿಯಲ್ಲಿ ಗುರುತಿಸಿರುವ 39 ತಾಲ್ಲೂಕುಗಳಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 2008ರ ಆರೋಗ್ಯ ಬಂಧು ಮಾರ್ಗಸೂಚಿಗಳನ್ವಯ ಖಾಸಗಿ ಸಂಸ್ಥೆಗಳು, ವೈದ್ಯಕೀಯ ಮಹಾವಿದ್ಯಾಲಯಗಳಿಗೆ ವಹಿಸಲು ಆದೇಶಿಸಲಾಗಿದೆ.
ಮೇಲೆ ಕ್ರ.ಸಂ. (3) ರಲ್ಲಿ ಓದಲಾದ ಆದೇಶದಲ್ಲಿ ರಾಜ್ಯದ ಇತರೆ ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಬಂಧು ಯೋಜನೆಗೆ ಒಳಪಡಿಸಲಾಗಿದೆ.
ಮೇಲೆ ಕ್ರ.ಸಂ.(4) ರಲ್ಲಿ ಓದಲಾದ ಆದೇಶದಲ್ಲಿ, ಆರೋಗ್ಯ ಬಂಧು ಯೋಜನೆಯಡಿಯಲ್ಲಿನ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಧಿ ಪೂರ್ಣಗೊಂಡದ್ದು, ಅವಧಿ ಪೂರ್ಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರದ ವಶಕ್ಕೆ ಕೂಡಲೇ ಹಿಂಪಡೆದು, ಉಳಿದ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಧಿ ಪೂರ್ಣಗೊಂಡ ನಂತರ ಇಲಾಖೆ ವಶಕ್ಕೆ ಪಡೆಯಲು ಹಾಗೂ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು/ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸರ್ಕಾರೇತರ ಸಂಸ್ಥೆಗಳಿಗೆ ಆರೋಗ್ಯ ಬಂಧು ಯೋಜನೆಯಡಿ ನೀಡುವಾಗ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪರಿಷ್ಕೃತ ಒಡಂಬಡಿಕೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಅನುಮೋದನೆ ಪಡೆಯಲು ಆದೇಶಿಸಲಾಗಿದೆ.
ಮೇಲೆ ಕ್ರಸಂ. (5) ರಲ್ಲಿ ಓದಲಾದ ಆದೇಶದಲ್ಲಿ, ಆರೋಗ್ಯ ಬಂಧು ಯೋಜನೆಯಡಿ ನಿರ್ವಹಣೆಗೆ ನೀಡಲಾದ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದಿ: 31.03.2024ರವರೆಗೆ ಮುಂದುವರೆಸಿ ಆದೇಶಿಸಿದೆ.
ಮೇಲೆ ಕ್ರ.ಸಂ. (6) ರಲ್ಲಿ ಓದಲಾದ ಏಕಕಡತದಲ್ಲಿ ಆರೋಗ್ಯ ಬಂಧು ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳ ಬದಲಾವಣೆಗಳೊಂದಿಗೆ Revised Arogya Bhandu ಮಾರ್ಗಸೂಚಿ 2024-25 ಅನುಮೋದನೆಗಾಗಿ ಆಯುಕ್ತರು, ಆಕುಕ ಸೇವೆಗಳು ಇವರಿಂದ ಸ್ವೀಕೃತವಾಗಿದೆ.
ಆಯುಕ್ತರು, ಆಕುಕ ಸೇವೆಗಳು ಇವರಿಂದ ಸ್ವೀಕೃತವಾದ ಏಕಕಡತದಲ್ಲಿ ಸ್ವೀಕೃತವಾದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಆರೋಗ್ಯ ಬಂಧು ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೆಳಕಂಡ ಪ್ರಮುಖ ಅಂಶಗಳು ಪರಿಷ್ಕೃತ ಆರೋಗ್ಯ ಬಂಧು ಯೋಜನೆ ಮಾರ್ಗಸೂಚಿಗಳನ್ನು ಒಳಗೊಳ್ಳುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿದೆ.
1. ಆರೋಗ್ಯ ಬಂಧು ಯೋಜನೆಯಡಿ ನಿರ್ವಹಣೆಗೆ ನೀಡಲಾದ ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳ ವಾರ್ಷಿಕ ನವೀಕರಣದ ಮೊದಲು ಕಡ್ಡಾಯ NQAS ಪ್ರಮಾಣೀಕರಣವನ್ನು ಹೊಂದಿರತಕ್ಕದ್ದು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಗೆ ಆಯ್ಕೆಯಾದ ಸಂಸ್ಥೆಗಳಿಗೆ ಆರೋಗ್ಯ ಕೇಂದ್ರಗಳನ್ನು ಹಸ್ತಾಂತರಿಸುವ ಮೊದಲು ಮೂಲಭೂತ ಸೌಲಭ್ಯಗಳ ಲಭ್ಯತೆ ಮತ್ತು ಅದರ ಭೌಗೋಳಿಕ ಪರಿಮಿತಿ ವಿವರಗಳನ್ನು ಪಡೆದು ಪ್ರತಿ ನವೀಕರಣದ ಹಂತದಲ್ಲಿ ಇವುಗಳನ್ನು ಪರಿಶೀಲಿಸಬೇಕಾಗುವುದು.
2. ಆರೋಗ್ಯ ಬಂಧು ಯೋಜನೆಯಡಿಯಲ್ಲಿ ನಿರ್ವಹಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು/ಸಮುದಾಯ ಆರೋಗ್ಯ ಕೇಂದ್ರಗಳು/ ತಾಲ್ಲೂಕು ಆಸ್ಪತ್ರೆಗಳನ್ನು ನೀಡಲು ನಿಯಮಾನುಸಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಆಯ್ಕೆ ಮಾಡಬೇಕು ಮತ್ತು ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗುವುದು.
3. ಆರೋಗ್ಯ ಬಂಧು ಯೋಜನೆಯಡಿಯಲ್ಲಿ ಆರೋಗ್ಯ ಕೇಂದ್ರಗಳನ್ನು ನಿರ್ವಹಣೆ ಮಾಡಲು ಪ್ರಾಥಮಿಕ. ಆರೋಗ್ಯ ಕೇಂದ್ರ ಆಯ್ಕೆ ಮಾಡಬೇಕಾದ ಸಂಸ್ಥೆಗಳನ್ನು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಶಿಫಾರಸ್ಸು ಮಾಡಬೇಕು ಹಾಗೂ ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯಬೇಕಾಗುವುದು.
4. ಆರೋಗ್ಯಬಂಧು ಯೋಜನೆಯಡಿ ಆರೋಗ್ಯ ಕೇಂದ್ರಗಳ ನಿರ್ವಹಣೆಗಾಗಿ ಆಯ್ಕೆಗೊಂಡ ಸಂಸ್ಥೆಗಳಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ವೇತನ ಮತ್ತು ಸೇವಾ ಷರತ್ತುಗಳು NHM ಅಡಿಯಲ್ಲಿನ ನಿಗದಿಯಾದ ಮಾನದಂಡಗಳ ಅನುಸಾರ ಒದಗಿಸುವುದು.
ಮೇಲೆ ಓದಲಾದ(7)ರ ಆರ್ಥಿಕ ಇಲಾಖೆ ಹಿಂಬರಹದಲ್ಲಿ ಆರೋಗ್ಯ ಸಂಸ್ಥೆಗಳ ನಿರ್ವಹಣೆಗಾಗಿ ಸಾಮಾನ್ಯವಾಗಿ ತಗಲುವ ವೆಚ್ಚವನ್ನು ಆಯವ್ಯಯದಲ್ಲಿ ಒದಗಿಸಲಾದ ಅನುದಾನದ ಮಿತಿಯಲ್ಲಿ ಆರೋಗ್ಯ ಬಂಧು ಯೋಜನೆ ಅಡಿ ನಿರ್ವಹಣೆ ಮಾಡಲು ಅನುಮತಿ ನೀಡಿರುತ್ತದೆ.
ಮುಂದುವರೆದು, ಆರೋಗ್ಯ ಬಂಧು ಅಡಿಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯ್ಕೆ ಅಥವಾ ಮುಂದುವರೆಸುವಿಕೆಯನ್ನು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಈ ನಿಟ್ಟಿನಲ್ಲಿ MoUನಲ್ಲಿ ಸೂಕ್ತ ಬದಲಾವಣೆಗಳನ್ನು ಕಾನೂನುಬದ್ಧವಾಗಿ ಮತ್ತು ಆಡಳಿತಾತ್ಮಕವಾಗಿ ಸಮರ್ಥನೀಯ ರೀತಿಯಲ್ಲಿ ಮಾಡುವಂತೆ ತಿಳಿಸಲಾಗಿದೆ.
ಮೇಲೆ ಓದಲಾದ(8)ರ ಏಕ ಕಡತದಲ್ಲಿ ಆರೋಗ್ಯ ಬಂಧು ಯೋಜನೆಯಡಿ ಪ್ರಸ್ತುತ ನಿರ್ವಹಣೆಗೆ ನೀಡಲಾಗಿರುವ 15 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 3 ತಿಂಗಳವರೆಗೆ ಮುಂದುವರೆಸಲು ಆರ್ಥಿಕ ಇಲಾಖೆಯು ಸಹಮತಿಸಿರುತ್ತದೆ. ಅದರಂತೆ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಆರೋಗ್ಯಬಂಧು ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು / ಸಮುದಾಯ ಆರೋಗ್ಯ ಕೇಂದ್ರಗಳನ್ನು / ತಾಲ್ಲೂಕು ಆಸ್ಪತ್ರೆಗಳನ್ನು (ಆರೋಗ್ಯ ಸೌಲಭ್ಯಗಳು), ವೈದ್ಯಕೀಯ ಕಾಲೇಜುಗಳು (ಸರ್ಕಾರಿ / ಖಾಸಗಿ), ಸರ್ಕಾರೇತರ ಸಂಸ್ಥೆಗಳು (NGOs), ಟ್ರಸ್ಟ್ಗಳು, ಇತರ ದತ್ತಿ ಸಂಸ್ಥೆಗಳು ಮತ್ತು ಲೋಕೋಪಕಾರಿ ಸಂಸ್ಥೆಗಳಿಗೆ (Philanthropic organizations) ನಿರ್ವಹಣೆಗೆ ನೀಡುವಾಗ ಅನುಬಂಧದಲ್ಲಿರುವ ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ನಿರ್ವಹಣೆಗೆ ನೀಡಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಕ್ರಮ ಕೈಗೊಳ್ಳಲು ಆದೇಶಿಸಿದೆ.