ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ(01)ರ ಏಕಕಡತದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ 22 ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಹಾಗೂ 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗಳಲ್ಲಿ ಒಟ್ಟಾರೆ 508 ಸೂಪರ್ ಸ್ಪೆಷಾಲಿಟಿ ಹುದ್ದೆಗಳು ಮಂಜೂರಾಗಿದ್ದು, ಮಂಜೂರಾದ ಹುದ್ದೆಗಳಿಗೆ ಎದುರಾಗಿ 232 ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಕರ್ತವ್ಯ ನಿರ್ವಹಿಸುತ್ತಿದ್ದು, 276 ಸೂಪರ್ ಸ್ಪೆಷಾಲಿಟಿ ವೈದ್ಯರ ಹುದ್ದೆಗಳು ಖಾಲಿಯಿರುತ್ತವೆ ಎಂದು, ರಾಜ್ಯ ಸರ್ಕಾರದ ನೀತಿಯಂತ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ನಿವೃತ್ತಿ ವಯಸ್ಸು 60 ಆಗಿರುತ್ತದೆ. ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಕೊರತೆಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತೊಂದರೆಯಾಗುತ್ತಿರುವುದರಿಂದ, ಸದರಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿ ವಯಸ್ಸನ್ನು 60ರಿಂದ 65 ವರ್ಷಕ್ಕೆ ಹೆಚ್ಚಿಸುವಂತೆ ಕೋರಿ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಇವರು ಪ್ರಸ್ತಾಪವನೆ ಸಲ್ಲಿಸಿರುತ್ತಾರೆ.
ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ ಆಇ ವೆಚ್ಚ-5/2025, ದಿನಾಂಕ:25.04.2025 ರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಸಹಮತಿ ಇರುವುದಿಲ್ಲ. ಕಾನೂನು ಇಲಾಖೆಯ ಟಿಪ್ಪಣಿ ಸಂಖ್ಯೆ:ಲಾ ಅಭಿಪ್ರಾಯ 322 2025, ದಿನಾಂಕ:07.05.2025ರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಸಹಮತಿಸಿರುತ್ತದೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾನಿಯಮಗಳು) ಹಿಂಬರಹ ಸಂಖ್ಯೆ: ಸಿಆಸುಇ 23 ಸೇನಿಸಿ 2025, ದಿನಾಂಕ:03.05.2025ರಲ್ಲಿ ನೀಡಿರುವ ಅಭಿಪ್ರಾಯಗಳನ್ನು ಪರಿಗಣಿಸಲಾಗಿರುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಸಂಬಂಧ ಡಾ: ಸಿ.ಎನ್ ಮಂಜುನಾಥ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯ ಶಿಫಾರಸ್ಸುಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಶಿಫಾರಸ್ಸು ಮಾಡಿರುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಲ್ಲಿ ಒಟ್ಟಾರೆ 508 ಸೂಪರ್ ಸ್ಪೆಷಾಲಿಟಿ ಹುದ್ದೆಗಳು ಮಂಜೂರಾಗಿದ್ದು, ಸದರಿ ಮಂಜೂರಾದ ಹುದ್ದೆಗಳ ಪೈಕಿ 232 ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ, 60 ವರ್ಷ ಪೂರ್ಣಗೊಳಿಸಲಿರುವ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಸಂಖ್ಯೆ 34 ಆಗಿದ್ದು, ಸದರಿ ವೈದ್ಯರುಗಳಿಗೆ ಪ್ರಸ್ತುತ ನೀಡುತ್ತಿರುವ AICTE ವೇತನ ಶ್ರೇಣಿಯಲ್ಲಿ ವಯೋನಿವೃತ್ತಿ ಹೊಂದುವವರೆಗೆ ಮುಂದುವರೆಸಬೇಕಾಗಿದೆ.
ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ನೀಟ್ ಪರೀಕ್ಷೆ ಮೂಲಕ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗೆ ಪ್ರವೇಶ ಪಡೆದು, ಮೂರು ವರ್ಷಗಳ ಕೋರ್ಸಿನ ಮೂಲಕ ಹೆಚ್ಚಿನ ಅನುಭವವನ್ನು ಪಡೆದಿರುತ್ತಾರೆ. ಸದರಿ ಕೋರ್ಸ್ ಅನ್ನು ಪೂರ್ಣಗೊಳಿಸುವಾಗ ಸುಮಾರು 35 ವರ್ಷಗಳಾಗಿರುತ್ತದೆ. ಸೇವಾನಿರತ ವೈದ್ಯರುಗಳು ಈ ರೀತಿ ಸೂಪರ್ ಸ್ಪೆಷಾಲಿಟಿ ಕೋರ್ಸ್ ಅನ್ನು ಪೂರ್ಣಗೊಳಿಸುವ ವೇಳೆಗೆ 40 ರಿಂದ 45 ವರ್ಷಗಳನ್ನು ದಾಟಿರುತ್ತಾರೆ. ಇದರಿಂದಾಗಿ ಸದರಿ ವೈದ್ಯರುಗಳು ಸರ್ಕಾರಿ ಸೇವೆಯಲ್ಲಿ 60 ವರ್ಷ ವಯಸ್ಸಿಗೆ ವಯೋನಿವೃತ್ತಿ ಹೊಂದುವ ಸಮಯದಲ್ಲಿ ಕೇವಲ 15ರಿಂದ 20 ವರ್ಷಗಳ ಸೇವೆಯನ್ನು ಸಲ್ಲಿಸಲು ಮಾತ್ರ ಸಾಧ್ಯವಾಗುತ್ತದೆ. ಇದರಿಂದಾಗಿ ಸದರಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಹೊಂದಿರುವ ವೃತ್ತಿ ಅನುಭವವನ್ನು ಸಂಪೂರ್ಣವಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ.
ರಾಜ್ಯದ ಸ್ವಾಯತ್ತ ಸಂಸ್ಥೆಗಳಾದ ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ವೇತನ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದಲ್ಲಿ ಕಡಿಮೆಯಿರುವುದರಿಂದ, ಸೇವೆಗೆ ಸೇರಲು ಇಚ್ಛೆ ವ್ಯಕ್ತಪಡಿಸುವ ವೈದ್ಯರಗಳ ಪ್ರಮಾಣವು ಕಡಿಮೆ ಇರುತ್ತದೆ. ಸರ್ಕಾರವು ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿಯನ್ನು 65 ವರ್ಷಗಳಿಗೆ ವಿಸ್ತರಿಸಿದ್ದಲ್ಲಿ, ಸದರಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಸೇವಾ ಅನುಭವದ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಸೂಪರ್ ಸ್ಪೆಷಾಲಿಟಿ ವೃತ್ತಿಯು ಉನ್ನತ ಮಟ್ಟದ ತರಬೇತಿ ಹಾಗೂ ವೃತ್ತಿಪರತೆಯನ್ನು ಹೊಂದಿರುತ್ತದೆ.
ಸ್ವಾಯತ್ತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು 65 ವರ್ಷಕ್ಕೆ ವಯೋನಿವೃತ್ತಿ ಹೊಂದಿದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಬೋಧಕ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕೊರತೆ ಉಂಟಾಗುವುದನ್ನು ತಡೆಯಬಹುದಾಗಿರುತ್ತದೆ.
ಪ್ರಸ್ತುತ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ಪ್ರಮಾಣ ತೀವ್ರಗತಿಯಲ್ಲಿ ಕಡಿಮೆಯಾಗಿರುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವೈದ್ಯರುಗಳು ಬೋಧನೆ, ಕ್ಲಿನಿಕಲ್, ಪೇಷಂಟ್ ಕೇರ್ ಹಾಗೂ ಇತ್ಯಾದಿ ಸೇವೆಗಳನ್ನು ನೀಡಲು ಒಪ್ಪಿದಲ್ಲಿ ಅವರುಗಳ ವಯೋ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲು ಸಕ್ಷಮ ಪ್ರಾಧಿಕಾರಕ್ಕೆ ಅವಕಾಶ ಕಲ್ಪಿಸಿರುತ್ತದೆ.
ಆದ್ದರಿಂದ, ಪ್ರಸ್ತುತ ಇರುವ ವಯೋನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸುವುದರಿಂದ, ಸರ್ಕಾರದ ಸೂಪರ್ ಸ್ಪೆಷಾಲಿಟಿ ಸಂಸ್ಥೆಗಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ 22 ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಹಾಗೂ 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಕೊರತೆ ಇರುವುದರಿಂದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ನಿವೃತ್ತಿ ನಂತರ ಬದಲಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಇಲಾಖೆಯಲ್ಲಿ ಲಭ್ಯವಿಲ್ಲದಿರುವುದರಿಂದ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲವಾದ್ದರಿಂದ, ಸೇವೆಯಲ್ಲಿ ಮುಂದುವರೆಯುವ ಸೂಪರ್ ಸ್ಪೆಷಾಲಿಟಿ ವೈದ್ಯರುಗಳನ್ನು ಆಡಳಿತಾತ್ಮಕ ಅಥವಾ ಇತರೆ ಹುದ್ದೆಗಳಿಗೆ ನೇಮಕಾತಿ ಮಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಗಳಿಗೆ ಹೆಚ್ಚಿಸಲು ಸರ್ಕಾರವು ತೀರ್ಮಾನಿಸಿದ್ದು, ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.