ಮುಂಬೈ: ಪತಿಯ ಮನೆಯಲ್ಲಿ ಪತ್ನಿಗೆ ಅಡುಗೆ ಮಾಡಿಕೊಳ್ಳಲು ಬಿಡದಿರುವುದು ಅಥವಾ ಅಡುಗೆಮನೆ ಪ್ರವೇಶಿಸದಂತೆ ತಡೆಯುವುದು ಕೇವಲ ಸಣ್ಣ ವಿಷಯವಲ್ಲ, ಅದು ಮಾನಸಿಕ ಕ್ರೌರ್ಯ ಕ್ಕೆ ಸಮಾನ ಎಂದು ಬಾಂಬೆ ಹೈಕೋರ್ಟ್ನ ನಾಗಪುರ ಪೀಠ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
2022ರ ನವೆಂಬರ್ನಲ್ಲಿ ವಿವಾಹವಾಗಿದ್ದ ದಂಪತಿಗಳ ನಡುವೆ ಮದುವೆಯಾದ ಕೆಲವೇ ದಿನಗಳಲ್ಲಿ ಜಗಳ ಆರಂಭವಾಗಿತ್ತು. ಈ ವೇಳೆ ಪತಿ ತನ್ನನ್ನು ಮನೆಯಾಳಿನಂತೆ ನಡೆಸಿಕೊಳ್ಳುತ್ತಿದ್ದಾನೆ ಮತ್ತು ಅಡುಗೆಮನೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಇದರಿಂದಾಗಿ ತಾನು ಹೊರಗಡೆಯಿಂದ ಆಹಾರ ತರಿಸಿಕೊಂಡು ಸೇವಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು ಎಂದು ಆಕೆ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಅಭಿಮತ:
ಪತ್ನಿ ದಾಖಲಿಸಿರುವ ಕ್ರೌರ್ಯದ ಕೇಸ್ ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟಿಸ್ ಊರ್ಮಿಳಾ ಜೋಷಿ ಫಾಲ್ಕೆ ಅವರ ಪೀಠವು ಈ ಕೆಳಗಿನ ಅಂಶಗಳನ್ನು ಒತ್ತಿ ಹೇಳಿದೆ.
ಒಬ್ಬ ಮಹಿಳೆಗೆ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳುವುದು ಆಕೆಯ ಘನತೆಗೆ ಮಾಡುವ ಹಾನಿಯಾಗಿದೆ.ಪತ್ನಿಯನ್ನು ಸತತವಾಗಿ ಪೀಡಿಸುವುದು, ಆಕೆಯ ಚಲನವಲನಗಳನ್ನು ನಿರ್ಬಂಧಿಸುವುದು ಮತ್ತು ಮನೆಯಲ್ಲಿನ ಮೂಲಭೂತ ಅಗತ್ಯಗಳಿಂದ ವಂಚಿಸುವುದು ಮಾನಸಿಕ ಕ್ರೌರ್ಯದ ಸ್ಪಷ್ಟ ಉದಾಹರಣೆಗಳಾಗಿವೆ.
ತಾನು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತೀಕಾರವಾಗಿ ಪತ್ನಿ ಈ ಸುಳ್ಳು ಕೇಸ್ ಹಾಕಿದ್ದಾಳೆ ಎಂಬ ಪತಿಯ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.ಒಟ್ಟಾರೆಯಾಗಿ, ಪತ್ನಿಯ ಮೂಲಭೂತ ಹಕ್ಕುಗಳು ಮತ್ತು ಆಕೆಯ ಗೌರವವನ್ನು ಕಾಪಾಡುವುದು ವೈವಾಹಿಕ ಜೀವನದಲ್ಲಿ ಅತಿ ಮುಖ್ಯ ಎಂದು ನ್ಯಾಯಾಲಯ ಈ ಮೂಲಕ ಸ್ಪಷ್ಟಪಡಿಸಿದೆ.








