ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಾಯಿಸಲಾಗಿರುವ ಮೋಟಾರು ಸೈಕಲ್, ಆಟೋ, ಕಾರು, ಸರಕು ವಾಹನಗಳು, ಟ್ರ್ಯಾಕ್ಟರ್ ಅಥವಾ ಟ್ರೈಲರ್ ಲಾರಿ, ಬಸ್ಸು, ಅಂಬುಲೇನ್ಸ್, ಶಾಲಾ ವಾಹನ ಮುಂತಾದ ವರ್ಗದ ವಾಹನಗಳ ಮಾಲೀಕರು ನೋಂದಣಿ ಅರ್ಹತಾ ಪತ್ರದ ಅವಧಿ ಮುಗಿದಿರುವ ತಮ್ಮ ವಾಹನಗಳ ನೋಂದಣಿ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ನವೀಕರಿಸಿಕೊಳ್ಳಲು ಮತ್ತು ಬಾಕಿ ಇರುವ ಮೋಟಾರು ವಾಹನ ರಸ್ತೆ ತೆರಿಗೆಯನ್ನು ಕೂಡಲೇ ಪಾವತಿಸಬೇಕೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ತಿಳಿಸಿದ್ದಾರೆ.
15 ವರ್ಷ ತುಂಬಿದ ಸ್ವಂತ ಬಳಕೆಯ ಮೋಟಾರು ಸೈಕಲ್, ಕಾರು, ಟ್ರ್ಯಾಕ್ಟರ್ ಅಥವಾ ಟ್ರೈಲರ್ ಮುಂತಾದ ವಾಹನಗಳಿಗೆ ಕೂಡಲೇ ನೋಂದಣಿ ಪತ್ರ ನವೀಕರಿಸಿಕೊಳ್ಳಬೇಕು. ಎಲ್ಲಾ ಆಂಬುಲೇನ್ಸ್ ವಾಹನದ ಮಾಲೀಕರು ಕಡ್ಡಾಯವಾಗಿ ಜಿ.ಪಿ.ಎಸ್ ಸಾಧನಗಳನ್ನು ಅಳವಡಿಸಿಕೊಂಡು ಕೂಡಲೇ ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು. ಹಾಗೆಯೇ ಎಲ್ಲಾ ಶಾಲಾ, ಕಾಲೇಜು ವಾಹನಗಳು ಸಹ ನಿಯಮಾನುಸಾರ ಅಗತ್ಯವಿರುವ ಎಲ್ಲಾ ಸುರಕ್ಷಿತ ಮಾನದಂಡಗಳನ್ನು ಅಳವಡಿಸಿಕೊಂಡು ಕೂಡಲೇ ತಮ್ಮ ವಾಹನಗಳ ಅರ್ಹತಾ ಪತ್ರ ನವೀಕರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
ದುರಸ್ತಿ ಮಾಡಲಾಗದ ಅಥವಾ ಉಪಯೋಗಿಸಲು ಯೋಗ್ಯವಲ್ಲದಂತಹ ವಾಹನಗಳ ನೋಂದಣಿ ಪತ್ರಗಳನ್ನು ರದ್ದತಿಪಡಿಸಿಕೊಂಡು ನಂತರ ಅವುಗಳನ್ನು ವಿಲೇವಾರಿ ಮಾಡಲು ಸಂಬಂಧಿಸಿದ ವಾಹನಗಳ ಮಾಲೀಕರು ಅಗತ್ಯ ಕ್ರಮವಹಿಸಬೇಕಾಗಿರುತ್ತದೆ. ಹಾಗೆ ಮಾಡದೇ ಬೇರೆಯವರಿಗೆ ಕಾನೂನು ಬಾಹಿರವಾಗಿ ವಾಹನಗಳನ್ನು ಮಾರಾಟ ಮಾಡಿದಲ್ಲಿ ಅಂತಹ ವಾಹನಗಳ ದುರುಪಯೋಗದಿಂದ ಮುಂದೇ ಸಂಭವಿಸಬಹುದಾದ ಯಾವುದೇ ನಷ್ಟ, ತಂಟೆ, ತಕರಾರು ಮತ್ತು ನ್ಯಾಯಾಲಯ ಅಥವಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಿಂದಾಗುವ ಯಾವುದೇ ಕಾನೂನಾತ್ಮಕ ತೊಂದರೆಗಳಿಗೆ ವಾಹನದ ಮಾಲೀಕರೇ ಪೂರ್ಣ ಜವಾಬ್ದಾರರಾಗಿರುತ್ತಾರೆ ಎಂಬುದನ್ನು ಗಮನಿಸಲು ಈ ಮೂಲಕ ಸೂಚಿಸಲಾಗಿದೆ.
ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ವಾಹನಕ್ಕಾಗಿ ವಿಶೇಷ ತಪಾಸಣಾ ಕಾರ್ಯ ನಡೆಸಿ ದಾಖಲಾತಿಗಳು ಸರಿಯಿಲ್ಲದ ವಾಹನಗಳ ಮೇಲೆ ಮೋಟಾರು ವಾಹನ ಕಾಯ್ದೆ ಅನ್ವಯ ನಿಯಮಾನುಸಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಆದ್ದರಿಂದ ಎಲ್ಲಾ ವಾಹನಗಳ ಮಾಲೀಕರು ಅಥವಾ ಚಾಲಕರು ತಮ್ಮ-ತಮ್ಮ ವಾಹನಗಳ ದಾಖಲಾತಿಗಳನ್ನು ಸರಿಪಡಿಸಿಕೊಂಡು ಸುಸ್ಥಿತಿಯಲ್ಲಿ ವಾಹನಗಳನ್ನು ಉಪಯೋಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.








