ಬೆಂಗಳೂರು : 2017-18ನೇ ಸಾಲಿನ ಪೂರ್ವದಲ್ಲಿ ಪ್ರಾರಂಭಗೊಂಡಿರುವ ಖಾಸಗಿ ಶಾಲೆಗಳಿಗೆ 2024-25ನೇ ಸಾಲಿಗೆ ಮಾನ್ಯತೆ ನವೀಕರಣ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಗಳಂತೆ, ಖಾಸಗಿ ಅನುದಾನಿತ / ಅನುದಾನರಹಿತ ಶಾಲೆಗಳು 2024-25ನೇ ಸಾಲಿಗೆ ಮಾನ್ಯತೆ ನವೀಕರಣಕ್ಕೆ ನಿಯಮಾನುಸಾರ ಎಲ್ಲಾ ಅಗತ್ಯ ದಾಖಲೆ ಮತ್ತು ಮಾಹಿತಿಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆ ನವೀಕರಣ ಪಡೆಯಬೇಕಿರುತ್ತದೆ. ಉಲ್ಲೇಖ [2]ರಲ್ಲಿ ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಕ್ಷಮ ಪ್ರಾಧಿಕಾರದಿಂದ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಅಗ್ನಿ ಸುರಕ್ಷತಾ ಸಮಾಪನ ಪತ್ರ ಹಾಗೂ ಸರ್ಕಾರದ ಆದೇಶದಂತೆ ಶಾಲಾ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶ ಹಾಗೂ ಅನುಮೋದಿತ ಕಟ್ಟಡ ನಕ್ಷೆಯನ್ನು ಪಡೆದು ಮಾನ್ಯತೆ ನವೀಕರಣಕ್ಕಾಗಿ ದಿನಾಂಕ:30-09-2024ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅದರಂತೆ, ನಿಯಮಾನುಸಾರ ಎಲ್ಲಾ ಸುರಕ್ಷತಾ ಪ್ರಮಾಣ ಪತ್ರಗಳು, ದಾಖಲೆಗಳು ಮತ್ತು ಇತರೆ ಷರತ್ತುಗಳನ್ನು ಪೂರೈಸಿರುವ ಶಾಲೆಗಳಿಗೆ ಮಾನ್ಯತೆಯನ್ನು ನವೀಕರಿಸಲಾಗುತ್ತಿದೆ.
2017-18ನೇ ಸಾಲಿನ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ | ಅನುದಾರಹಿತ ಶಾಲೆಗಳಿಗೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಸಮಾಪನ ಪತ್ರ, ಶಾಲಾ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶ ಹಾಗೂ ಅನುಮೋದಿತ ಕಟ್ಟಡ ನಕ್ಷೆಯನ್ನು ಪಡೆದು ಸಲ್ಲಿಸಲು ಶಾಲಾ ಆಡಳಿತ ಮಂಡಳಿಗಳು ಕಾಲಾವಕಾಶ ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಲ್ಲೇಖ (3)ರಂತೆ 2017-18 ರ ಪೂರ್ವದಲ್ಲಿ ನೋಂದಣಿ ಪಡೆದು ನಡೆಸಲಾಗುತ್ತಿರುವ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳಿಗೆ ಮಾತ್ರ ಅನ್ವಯಿಸುವಂತೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಸಮಾಪನ ವತ್ರ, ಶಾಲಾ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶ ಹಾಗೂ ಅನುಮೋದಿತ ಕಟ್ಟಡ ನಕ್ಷೆಗಳನ್ನು ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವ ಬಗ್ಗೆ ಈ ಜ್ಞಾಪನದೊಂದಿಗೆ ನೀಡಿರುವ ನಮೂನೆಯಲ್ಲಿ ರೂ.100-00 ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರವನ್ನು ಶಾಲಾ ಆಡಳಿತ ಮಂಡಳಿಗಳು ದೃಢೀಕರಿಸಿ ಆನ್‌ಲೈನ್ ಮೂಲಕ ಮಾನ್ಯತೆ ನವೀಕರಣ ಅರ್ಜಿಯೊಂದಿಗೆ ಸಲ್ಲಿಸಿದಲ್ಲಿ ಅಂತಹ ಶಾಲೆಗಳಿಗೆ ಮಾತ್ರ ಷರತ್ತಿನ ಮೇರೆಗೆ 2024-25 ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಒಂದು ವರ್ಷಕ್ಕೆ ಷರತ್ತು ಬದ್ಧವಾಗಿ ಮಾನ್ಯತೆ ನವೀಕರಿಸಲು ಕ್ರಮವಹಿಸುವಂತೆ ಸೂಚಿಸಿದೆ. ಉಳಿದಂತೆ ಉಲ್ಲೇಖ-2ರ ಸುತ್ತೋಲೆಯ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.