ಬೆಂಗಳೂರು :2025-26ನೇ ಸಾಲಿನಲ್ಲಿ ಏಪ್ರಿಲ್-2025 ರಿಂದ ಜೂನ್-2025 ವರೆಗಿನ ತ್ರೈಮಾಸಿಕ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳ ಮೂಲಕ ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸಲಾಗುತ್ತಿದೆ.
2025-26ನೇ ಸಾಲಿಗೆ ಪ್ರತ್ಯಾಯೋಜಿಸಿರುವ ಈ ಆರ್ಥಿಕ ಅಧಿಕಾರಗಳ ಆದೇಶವು, 2025-26ನೇ ಸಾಲಿನ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚಗಳನ್ನು ಬಿಡುಗಡೆ ಮಾಡುವುದಕ್ಕೆ ಅನ್ವಯವಾಗುತ್ತದೆ. ಈ ಆದೇಶದಲ್ಲಿರುವ ಅಧಿಕಾರ ಪ್ರತ್ಯಾಯೋಜನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಚಲಾಯಿಸತಕ್ಕದ್ದೇ ಹೊರತು ಪುನರ್ ಪ್ರತ್ಯಾಯೋಜನೆ ಮಾಡತಕ್ಕದ್ದಲ್ಲ.
ಸರ್ಕಾರದ ಆದೇಶ ಸಂ: ಎಫ್‌ಡಿ 1 ಟಿಎಫ್‌ಪಿ: 2025, ಬೆಂಗಳೂರು, ದಿನಾಂಕ:02.04.2025
ಭಾಗ-I ಆಡಳಿತಾತ್ಮಕ ಅನುಮೋದನೆ:
1. ಒಂದು ಆರ್ಥಿಕ ವರ್ಷದಲ್ಲಿ ಮುಂದುವರಿದ ಅಥವಾ ಹೊಸ ಯೋಜನೆಗಳೆಂದು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣವನ್ನು ಆಡಳಿತ ಇಲಾಖೆಗಳು ಬಿಡುಗಡೆಗೊಳಿಸಬಹುದಾಗಿದೆ. ಮೇಲೆ (2) ಮತ್ತು (3) ರಲ್ಲಿ ಉಲ್ಲೇಖಿಸಲಾದ ಆದೇಶ ಮತ್ತು ಅರೆಸರ್ಕಾರಿ ಪತ್ರಗಳಲ್ಲಿ ಮುಂದುವರೆದ ಯೋಜನೆಗಳ ಮತ್ತು ಹೊಸ ಯೋಜನೆಗಳ ಅನುಮೋದನೆಗೆ ಮತ್ತು ಉಸ್ತುವಾರಿಗೆ ಯೋಜನಾ ಇಲಾಖೆಯು ನೀಡಿರುವ ಮಾರ್ಗಸೂಚಿಗಳನ್ನು ಹಾಗೂ 2025-26 ಸಾಲಿನಲ್ಲಿ ಯೋಜನಾ ಇಲಾಖೆಯು ಈ ಮಾರ್ಗದರ್ಶನ/ಸೂಚನೆಗಳನ್ನು ನೀಡಿದಲ್ಲಿ ಅದನ್ನೂ ಸಹ ಓದಿಕೊಳ್ಳಲು ತಿಳಿಸಿದೆ.
2. ಆಡಳಿತಾತ್ಮಕ ಅನುಮೋದನೆಯ ಆದೇಶವನ್ನು ಹಣ ಬಿಡುಗಡೆಯ ಆದೇಶವೆಂದು ಪರಿಭಾವಿಸತಕ್ಕದ್ದಲ್ಲ. ಅನುಮೋದನೆಯಾಗಿರುವ ವಿವಿಧ ಯೋಜನೆಗಳಿಗೆ ಅಧಿಕಾರ ಪ್ರತ್ಯಾಯೋಜನೆಯನ್ವಯ ಹಣ ಬಿಡುಗಡೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಬೇಕಾಗುತ್ತದೆ. ಯಾವುದೇ ಯೋಜನೆಗೆ ಹಣ ಬಿಡುಗಡೆ ಮಾಡುವ ಮೊದಲು ಯೋಜನೆಯ ಮಾರ್ಗಸೂಚಿ, ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ ಪ್ರಕ್ರಿಯೆ ಮುಂತಾದ ಆಡಳಿತಾತ್ಮಕ ಪರಿಶೀಲನೆಗಳನ್ನು ಆಡಳಿತ ಇಲಾಖೆಯು ಪರಿಶೀಲಿಸತಕ್ಕದ್ದು.
3. ಕಾಮಗಾರಿ ಅಂದಾಜುಗಳ ಅನುಮೋದನೆಗೆ ರೂ.10 ಕೋಟಿಗಳವರೆಗೆ ಮತ್ತು ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ರೂ.10ಕೋಟಿಗಳವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತಾತ್ಮಕ ಅನುಮೋದನೆಯನ್ನು (ಕೆ.ಟಿ.ಪಿ.ಪಿ ನಿಯಮಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಯವ್ಯಯದ ಲಭ್ಯತೆಗೊಳಪಟ್ಟು) ನೀಡಬಹುದಾಗಿದೆ.
4. ಬ್ಯಾಂಕ್/ಪಿಡಿ ಖಾತೆಗಳಿಗೆ ಹಣ ಬಿಡುಗಡೆ ಮಾಡುವ ಮೊದಲು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆಯೇ ಹಾಗೂ ಆಡಳಿತ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
ಭಾಗ- II ಹಣ ಬಿಡುಗಡೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ನಿರ್ದಿಷ್ಟವಾಗಿ ಅನುಮೋದನೆ ಪಡೆಯಬೇಕಾಗಿರುವ ಪ್ರಕರಣಗಳು:
5. ಈ ಆದೇಶದ ಅನುಬಂಧ-1 ರಲ್ಲಿ ವರ್ಗೀಕರಿಸಲಾಗಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಇನ್ನುಳಿದ ಯೋಜನೆಗಳಿಗೆ, ಕೆಳಗೆ ವಿವರಿಸಿದಂತೆ ಅಧಿಕಾರ ಪ್ರತ್ಯಾಯೋಜನೆ ಅನ್ವಯವಾಗುತ್ತದೆ.
6. ಎಲ್ಲಾ ಹೊಸ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಕಡ್ಡಾಯವಾಗಿ ಪಡೆಯತಕ್ಕದ್ದು.
7. ಎಲ್ಲಾ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಅನುದಾನದಡಿಯಲ್ಲಿ (VPP) ಒದಗಿಸಿರುವ ಅನುದಾನವನ್ನು ಬಿಡುಗಡೆ ಮಾಡಲು ಅಧಿಕಾರ ಪ್ರತ್ಯಾಯೋಜಿಸಿರುವುದಿಲ್ಲ.
ಷೇರು ಬಂಡವಾಳ ಮತ್ತು ಸಾಲಗಳು:
8. ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು, 1977ರಲ್ಲಿ ವಿಧಿಸಿರುವ ನಿಯಮಗಳನ್ನು ಮತ್ತು ಆರ್ಥಿಕ ಇಲಾಖೆಯು ಹೊರಡಿಸಿರುವ ಸರ್ಕಾರದ ಆದೇಶ ಸಂ:ಎಫ್‌ಡಿ: 1 ಬಿಎಲ್‌ಎ 2013, ದಿ:26.11.2013ರಲ್ಲಿನ ಸೂಚನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಡಳಿತ ಇಲಾಖೆಗಳು ಇದುವರೆಗೆ ಬಿಡುಗಡೆಯಾಗಿರುವ ಷೇರು ಬಂಡವಾಳವು ಅಧಿಕೃತ ಷೇರು ಬಂಡವಾಳದ ಮಿತಿಯನ್ನು ಮೀರದಿರುವುದನ್ನು ಹಾಗೂ ಷೇರು ಬಂಡವಾಳದ ರಾಜ್ಯದ ಪಾಲು ಷೇರುದಾರರ ಒಪ್ಪಂದದ ಪ್ರಕಾರ ಇರುವುದನ್ನು ಆಡಳಿತ ಇಲಾಖೆಗಳು ಖಚಿತಪಡಿಸಿಕೊಂಡು, ಆಯವ್ಯಯ ಅನುದಾನ ಲಭ್ಯವಿದ್ದಲ್ಲಿ, ರೂ.10 ಕೋಟಿಯೊಳಗಿನ ಷೇರು ಬಂಡವಾಳವನ್ನು ಆರ್ಥಿಕ
ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತ ಇಲಾಖೆಗಳು ಬಿಡುಗಡೆ ಮಾಡಬಹುದಾಗಿದೆ. ಒಂದು ವರ್ಷದಲ್ಲಿ ರೂ.10 ಕೋಟಿಗಿಂತ ಹೆಚ್ಚಿನ ಷೇರು ಬಂಡವಾಳವನ್ನು ಹಾಗೂ ಎಷ್ಟೇ ಮೊತ್ತದ ಸಾಲವನ್ನಾಗಲೀ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕಾಗುತ್ತದೆ.
ಭಾಗ-III ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಡಳಿತ ಇಲಾಖೆಗಳು ಹಣ ಬಿಡುಗಡೆ ಮಾಡಬಹುದಾದ ಪ್ರಕರಣಗಳು:
9. ಅನುಬಂಧ-2 ರಲ್ಲಿ ಪಟ್ಟಿ ಮಾಡಲಾದ ಬಾಬುಗಳಿಗೆ ಸಂಬಂಧಿಸಿದಂತೆ, ಆಯವ್ಯಯದಲ್ಲಿ ಒದಗಿಸಿರುವ ಮೊತ್ತದವರೆಗೆ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಹಣವನ್ನು ಬಿಡುಗಡೆ ಮಾಡಬಹುದಾಗಿದೆ. ಅನುಬಂಧ-2 ರಲ್ಲಿ ಪಟ್ಟಿ ಮಾಡಿರದ ಲೆಕ್ಕ ಶೀರ್ಷಿಕೆ/ಯೋಜನೆಗಳಿಗೆ ಈ ಆದೇಶದ ಕಂಡಿಕೆ 12 ರಿಂದ ಮುಂದಿನ ಕಂಡಿಕೆಗಳನ್ನು ಸಂದರ್ಭಾನುಸಾರ ಅನ್ವಯಿಸಿ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಉದ್ದೇಶ ಲೆ.ಶೀ. 021-ವೈದ್ಯಕೀಯ ವೆಚ್ಚ ರಡಿ Group DDO ಗಳಿಗೆ ಸಮಾನವಾಗಿ ಬಿಡುಗಡೆ ಮಾಡದೇ, ಅಧೀನ ಕಛೇರಿ (DDO) ಗಳ ಅವಶ್ಯಕತೆಯನುಸಾರ ಬಿಡುಗಡೆ ಮಾಡಲು ತಿಳಿಸಿದೆ.
10. ಬಾಕಿ ಕಾಮಗಾರಿಗಳ ಮೊತ್ತ: ಸಿವಿಲ್ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಂಡವಾಳ ಲೆ.ಶೀ. ಗಳಡಿ 2025-26ನೇ ಸಾಲಿಗೆ ಒದಗಿಸಿರುವ ಆಯವ್ಯಯವನ್ನು, ಈ ಆದೇಶದಲ್ಲಿ ತಿಳಿಸಿದ ವಿಧಾನಗಳನ್ನು ಮತ್ತು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 127 ವೆಚ್ಚ-12/2023, ದಿ:16.05.2023 ರಲ್ಲಿನ ಸೂಚನೆಗಳನ್ನು ಅನುಸರಿಸಿ ಬಿಡುಗಡೆ ಮಾಡುವಂತೆ ತಿಳಿಸಿದೆ.
ರೂ.10 ಕೋಟಿಗಳಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ ರಾಜ್ಯ ಯೋಜನೆಗಳು:
11. ರೂ.10 ಕೋಟಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ, ಮುಂದುವರಿದ ರಾಜ್ಯ ಯೋಜನೆಗಳಿಗೆ/ಕಾರ್ಯಕ್ರಮಗಳಿಗೆ/ವೇತನೇತರ ವೆಚ್ಚಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಯವ್ಯಯದಲ್ಲಿ ಒದಗಿಸಿರುವ ಮೊತ್ತವನ್ನು ಎರಡು ಕಂತಿನಲ್ಲಿ ಬಿಡುಗಡೆ ಮಾಡಬಹುದು.
12. ಪಿ.ಡಿ ಖಾತೆ ಅಥವಾ ಬ್ಯಾಂಕ್ ಖಾತೆಯಲ್ಲಿಡಲು ಆರ್ಥಿಕ ಇಲಾಖೆಯು ಸಹಮತಿಸಿರುವ ಯೋಜನೆಗಳಿಗೆ ಬ್ಯಾಂಕ್ ಖಾತೆ ಅಥವಾ ಪಿ.ಡಿ. ಖಾತೆಯಲ್ಲಿರುವ ಆರಂಭಿಕ ಶಿಲ್ಕಿನಲ್ಲಿ ಶೇ. 75ರಷ್ಟು ಮೊತ್ತವನ್ನು ವೆಚ್ಚ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಮೇಲೆ ತಿಳಿಸಿದಂತೆ ಬಿಡುಗಡೆ ಮಾಡಬೇಕಾಗುತ್ತದೆ.