ನವದೆಹಲಿ : ಕೇಂದ್ರ ಸರ್ಕಾರದ ಪ್ರಕಾರ ರೈಲ್ವೇಯಲ್ಲಿ ಯುವಕರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಲು ಭಾರತೀಯ ರೈಲ್ವೇ ಬದ್ಧವಾಗಿದೆ. 58,642 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ತಿಳಿಸಿದ್ದಾರೆ.
ರೈಲ್ವೆ ಸಚಿವ ವೈಷ್ಣವ್ ಅವರು ಲೋಕಸಭೆಯಲ್ಲಿ ರೈಲ್ವೆ (ತಿದ್ದುಪಡಿ) ಮಸೂದೆ 2024 ರ ಮೇಲಿನ ಚರ್ಚೆಗೆ ಉತ್ತರಿಸಿದರು. ಕಾಂಗ್ರೆಸ್‌ನ ಯುಪಿಎ ಸರ್ಕಾರದ ಅವಧಿಯಲ್ಲಿ 4,11,000 ಜನರಿಗೆ ರೈಲ್ವೆಯಲ್ಲಿ ಉದ್ಯೋಗ ದೊರೆತಿದ್ದರೆ, ಮೋದಿ ಸರ್ಕಾರದಲ್ಲಿ 5,02,000 ಯುವಕರನ್ನು ರೈಲ್ವೇಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ರೈಲ್ವೇಯಲ್ಲಿ ಖಾಲಿ ಇರುವ 58,642 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರದ ಮೋದಿ ಸರ್ಕಾರದ ಅಡಿಯಲ್ಲಿ, ಯುವಕರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಲು ರೈಲ್ವೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ರೈಲ್ವೇ ನೇಮಕಾತಿ ಪರೀಕ್ಷೆಗಳನ್ನು ಉಲ್ಲೇಖಿಸಿದ ರೈಲ್ವೆ ಸಚಿವರು, ಪ್ರಶ್ನೆ ಪತ್ರಿಕೆ ಸೋರಿಕೆಯ ಯಾವುದೇ ದೂರುಗಳಿಲ್ಲದೆ ಈ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ದಶಕಗಳ ಹಿಂದಿನ ಬೇಡಿಕೆಯಂತೆ ವಾರ್ಷಿಕ ಕ್ಯಾಲೆಂಡರ್ ಪ್ರಕಾರ ನೇಮಕಾತಿ ಮಾಡಲಾಗುತ್ತದೆ. ರೈಲ್ವೇ ಸಚಿವರೇ ಹೇಳುವಂತೆ ಈ ಸರ್ಕಾರಕ್ಕೂ ಮುನ್ನ ರೈಲ್ವೆ ಬಜೆಟ್ 25-30 ಸಾವಿರ ಕೋಟಿ ಇತ್ತು ಆದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ 2.52 ಲಕ್ಷ ಕೋಟಿಗೆ ಏರಿಸಲಾಗಿದೆ ಎಂದು ಹೇಳಿದರು.
ಈ 10 ವರ್ಷಗಳಲ್ಲಿ 31 ಸಾವಿರ ಕಿಲೋಮೀಟರ್‌ಗಳಷ್ಟು ಹೊಸ ಹಳಿಗಳನ್ನು ಹಾಕಲಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು. 15 ಸಾವಿರ ಕಿಲೋಮೀಟರ್ ರೈಲು ಹಳಿಗಳಲ್ಲಿ ರೈಲ್ ಪ್ರೊಟೆಕ್ಷನ್ ಸಿಸ್ಟಮ್ ರಕ್ಷಾಕವಚ ಕೆಲಸ ಮಾಡಲಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ 20 ವರ್ಷ ತೆಗೆದುಕೊಂಡ ಕೆಲಸವನ್ನು ಭಾರತದಲ್ಲಿ ಐದು ವರ್ಷಗಳಲ್ಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.