ಬೆಂಗಳೂರು : ರಾಜ್ಯ ಸರ್ಕಾರವು ಪ್ರಶ್ನೆ ಪತ್ರಿಕೆ ಸೇರಿ ನೇಮಕಾತಿ ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಕೃತ ಬುದ್ಧಿಮತ್ತೆ ಸೇರಿ ಇನ್ನಿತರ ಆಧುನಿಕ ತಂತ್ರಜ್ಞಾನ ಬಳಸಿ ನೇಮಕಾತಿ ಪ್ರಕ್ರಿಯೆಯನ್ನು ಭ್ರಷ್ಟಾಚಾರ ರಹಿತಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಲೋಕಸೇವಾ ಆಯೋಗ ಶನಿವಾರ ಆಯೋಜಿಸಿದ್ದ 25 ನೇ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ ಸಮ್ಮೇಳನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸೇವಾ ಆಯೋಗದ ಮೂಲಕ ಮಾಡಲಾಗುವ ನೇಮಕಾತಿ ಪ್ರಕ್ರಿಯೆ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತವಾಗಿರಬೇಕಿದೆ. ಅದಕ್ಕಾಗಿ ಬೇರೆ ರಾಜ್ಯಗಳು ಅನುಸರಿಸುವ ಮಾರ್ಗಗಳು ಹಾಗೂ ಕೃತಕ ಬುದ್ದಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೇಮಕಾತಿ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಸವಾಲುಗಳನ್ನು ಎದುರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಕಳೆದು ಹೋಗುತ್ತಿರುವ ವಿಶ್ವಾಸರ್ಹತೆ ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ನೇರ ನೇಮಕಾತಿ) ನಿಯಮಗಳು 2021 ನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಲೋಕಸೇವಾ ಆಯೋಗಗಳಿಂದ ನ್ಯಾಯಯುತ ಹಾಗೂ ತ್ವರಿತ ನೇಮಕಾತಿ ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ಹೇಳಿದರು.