ಬೆಂಗಳೂರು: ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿ ಹೊರಡಿಸಲಾಗಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಈ ಸಾಲಿನ ಪ್ರವೇಶಾತಿ ಬಯಸುವ ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
2026-27ನೇ ಸಾಲಿಗೆ ಈ ಹಿಂದಿನ ನಿಯಮದಂತೆ ಎಸ್‌ಎಸ್‌ಎಲ್‌ಸಿ (SSLC) ಅಂಕಗಳ ಆಧಾರದ ಮೇಲೆಯೇ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.ಬಾಹುಬಲಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಸೇರಿದಂತೆ ಒಟ್ಟು 51ಕ್ಕೂ ಹೆಚ್ಚು ಕಾಲೇಜುಗಳು ಸರ್ಕಾರದ ಈ ಹೊಸ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು.
ನ್ಯಾಯಾಲಯದ ಆದೇಶ
ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಹೊಸ ನಿಯಮಗಳನ್ನು ರೂಪಿಸುವವರೆಗೆ ಹಳೆಯ ಪದ್ಧತಿಯನ್ನೇ ಮುಂದುವರಿಸಲು ಅವಕಾಶ ನೀಡಲಾಗಿತ್ತು, ಅದನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಪ್ರಸ್ತುತ ಹಳೆಯ ನಿಯಮದಂತೆ ಪ್ರವೇಶಾತಿ ನಡೆಸಲು ಅನುಮತಿ ನೀಡಲಾಗಿದ್ದರೂ, ಈ ಆದೇಶವು ಸುಪ್ರೀಂಕೋರ್ಟ್ ನೀಡಲಿರುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.








